ಅಣ್ಣಿಗೇರಿ ದಾಸೋಹ ಮಠದ 62ನೇ ಜಾತ್ರಾ ಮಹೋತ್ಸವ ಸಂಪನ್ನ: ಮಠದ ಜೀರ್ಣೋದ್ಧಾರಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಚಾಲನೆ

Spread the love


ಅಣ್ಣಿಗೇರಿ: ಪಟ್ಟಣದ ಪ್ರಸಿದ್ಧ ದಾಸೋಹ ಮಠದ 62ನೇ ವರ್ಷದ ಜಾತ್ರಾ ಮಹೋತ್ಸವವು ಶನಿವಾರ ಹಾಗೂ ರವಿವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಭಕ್ತರ “ಹರಹರ ಮಹಾದೇವ”, “ಶಿವಕುಮಾರ ಮಹಾರಾಜ ಕೀ ಜೈ” ಹಾಗೂ “ಶಂಕರೇಂದ್ರ ಮಹಾರಾಜ ಕೀ ಜೈ” ಎಂಬ ಜೈಘೋಷಗಳ ನಡುವೆ ಶ್ರೀ ಮಠದ ವೈಭವಯುತ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಶನಿವಾರ ಮುಂಜಾನೆ ಶ್ರೀ ಮಠದ ಕರ್ತೃ ಗದ್ದಿಗೆಗೆ ವಿಶೇಷ ಅಭಿಷೇಕ ಹಾಗೂ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿಸಲಾಯಿತು.

ಸಂಜೆ ಮಠದ ಆವರಣದಿಂದ ಹೊರಟ ರಥೋತ್ಸವವು ಕಿತ್ತೂರ ರಾಣಿ ಚನ್ನಮ್ಮ ವೃತ್ತದ ಸಿದ್ದಲಿಂಗೇಶ್ವರ ದೇವಸ್ಥಾನದ ಪಾದಗಟ್ಟೆಯವರೆಗೆ ಸಾಗಿದ ಬಳಿಕ ಮರಳಿ ಶ್ರೀ ಮಠಕ್ಕೆ ಆಗಮಿಸಿತು. ರಥೋತ್ಸವದ ಮಾರ್ಗದವರೆಗೆ ಅಣ್ಣಿಗೇರಿ ವಾಲ್ಮೀಕಿ ನಗರದ ಜಾಂಜ್ ಮೇಳ ಹಾಗೂ ರಾಣೆಬೆನ್ನೂರಿನ ಬಸವಣ್ಣೆಪ್ಪ ಅಟವಾಳಗಿ ತಂಡದವರಿಂದ ನಡೆದ ಗುಗ್ಗಳ, ವೀರಭದ್ರೇಶ್ವರ ಒಡಪು ಹಾಗೂ ಖಡ್ಗ ಒರಸೆ ಪ್ರದರ್ಶನಗಳು ಭಕ್ತರ ಗಮನ ಸೆಳೆದವು.

ಇದೇ ಸಂದರ್ಭದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಮಠದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಸರ್ಕಾರದಿಂದ ಮೊದಲ ಹಂತದಲ್ಲಿ ಮಂಜೂರಾದ 30 ಲಕ್ಷ ರೂ.ಗಳ ಕಾಮಗಾರಿಗೆ ಶ್ರೀಗಳ ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕರು, ತಾನು ಈ ಮಠಕ್ಕೆ ಒಬ್ಬ ಸಾಮಾನ್ಯ ಭಕ್ತನಾಗಿ ಬಂದಿರುವುದಾಗಿ ತಿಳಿಸಿ, ಮಠದ ಶಕ್ತಿ ಹಾಗೂ ಶ್ರೀಗಳ ಆಶೀರ್ವಾದ ಇರುವವರೆಗೂ ಭಕ್ತನಾಗಿ ಮತ್ತು ಶಾಸಕನಾಗಿ ಮಠದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಮೊದಲ ಹಂತದ ಹಣ ಈಗಾಗಲೇ ಬಿಡುಗಡೆಯಾಗಿದ್ದು, ಮಠದ ಸಂಪೂರ್ಣ ಜೀರ್ಣೋದ್ಧಾರ ಪೂರ್ಣಗೊಳ್ಳುವವರೆಗೂ ಸರ್ಕಾರದಿಂದ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದೆಂದು ಭರವಸೆ ನೀಡಿದರು.

ದಾಸೋಹ ಮಠದ ಪರಂಪರೆಯಂತೆ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಎಂಟು ದಿನಗಳಿಂದ ನಿರಂತರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯ ಮುಖ್ಯ ದಿನದಂದು 5 ಕ್ವಿಂಟಾಲ್ ಬುಂದಿ, ಮಾದಲಿ ಹಾಗೂ ಕರದಂಟುಗಳನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ದಾಸೋಹ ಮಠ ನಿರಂತರ ಸೇವಾ ಟ್ರಸ್ಟ್ ಅಧ್ಯಕ್ಷ ರಾಜೇಶ್ವರರಾವ್ ದೇಸಾಯಿ, ಪ್ರಧಾನ ಕಾರ್ಯದರ್ಶಿ ಷಣ್ಮುಖ ಗುರಿಕಾರ, 62ನೇ ಜಾತ್ರಾ ಮಹೋತ್ಸವದ ಅಧ್ಯಕ್ಷ ವಿರುಪಾಕ್ಷಪ್ಪ ಹಾಳದೋಟರ, ಉಪಾಧ್ಯಕ್ಷ ಹೇಮಣ್ಣ ಶ್ಯಾನಭೋಗರ, ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗಪ್ಪ ದಳವಾಯಿ ಸೇರಿದಂತೆ ಮಠದ ಟ್ರಸ್ಟ್‌ನ ಎಲ್ಲಾ ಸದಸ್ಯರು ಹಾಗೂ ಅಣ್ಣಿಗೇರಿ ಸುತ್ತಮುತ್ತಲಿನ ಸಾವಿರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Leave a Reply

Your email address will not be published. Required fields are marked *