
ಕುಂದಗೋಳ : ತಾಲೂಕಿನ ಮಳಲಿ ಗ್ರಾಮದ ಐತಿಹಾಸಿಕ ಕುಂದಗೋಳ ಬಸವೇಶ್ವರ ಕರಿಹಂಚಿನ ದೇವಾಲಯಕ್ಕೆ ಸೇರಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಹಿಂದಿನ ಗ್ರಾಮ ಪಂಚಾಯತಿ ಅಧಿಕಾರಿಗಳು ಶಾಮೀಲಾಗಿ, ದಾಖಲೆಗಳನ್ನು ತಿದ್ದುವ ಮೂಲಕ ದೇವಸ್ಥಾನದ ಅಕ್ಕಪಕ್ಕದವರಿಗೆ ಹಗಲು ದರೋಡೆ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದು, ದೇವರ ಆಸ್ತಿ ನುಂಗಿದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಖಲೆಗಳ ಪ್ರಕಾರ 1961-62 ರಲ್ಲಿ ದೇವಸ್ಥಾನಕ್ಕೆ ಅಂದಾಜು 06 ರಿಂದ 07 ಗುಂಟೆ ಜಾಗವಿತ್ತು. ಆದರೆ 1999 ರಿಂದ ಗ್ರಾಮ ಪಂಚಾಯತಿಯ ಆಸ್ತಿ ರಿಜಿಸ್ಟರ್‌ನಲ್ಲಿ ವ್ಯವಸ್ಥಿತವಾಗಿ ತಿದ್ದುಪಡಿ ಮಾಡುತ್ತಾ ಬರಲಾಗಿದೆ. ಅಕ್ಕಪಕ್ಕದವರು ಒತ್ತುವರಿ ಮಾಡಿಕೊಂಡ ಪರಿಣಾಮ 2021 ರ ಹೊತ್ತಿಗೆ ದೇವಸ್ಥಾನಕ್ಕೆ ಜಾಗವೇ ಇಲ್ಲದಂತೆ ಮಾಡಲಾಗಿದೆ. ಸಾರ್ವಜನಿಕ ಮತ್ತು ಧಾರ್ಮಿಕ ಆಸ್ತಿಯನ್ನು ರಕ್ಷಿಸಬೇಕಾದ ಗ್ರಾಮ ಪಂಚಾಯತಿಯೇ ಬೇಲಿಯನ್ನು ಎದ್ದು ಹೊಲ ಮೇಯ್ದಂತೆ ವರ್ತಿಸಿದೆ.
ಅತ್ಯಂತ ಆಘಾತಕಾರಿ ವಿಷಯವೆಂದರೆ, ಗ್ರಾಮಠಾಣಾ ವ್ಯಾಪ್ತಿಯಲ್ಲಿದ್ದ ಈ ಜಾಗಕ್ಕೆ ಸಂಬಂಧಿಸಿದಂತೆ 2012 ರಲ್ಲಿ ಹಿಂದಿನ ಆಡಳಿತ ಮಂಡಳಿಯು ಗ್ರಾಮ ಪಂಚಾಯತಿಯಲ್ಲಿ ಯಾವುದೇ ಕೋರಂ ಇಲ್ಲದೆ, ಅಧಿಕೃತ ಠರಾವು ಪ್ರತಿಯಿಲ್ಲದೆ ಹಾಗೂ ವಾಡ್ನಿ ಕಾಗದಪತ್ರಗಳಿಲ್ಲದೆ ಅಕ್ರಮವಾಗಿ ದಾಖಲೆ ಸೃಷ್ಟಿಸಿದೆ. ತಮಗೆ ಬೇಕಾದಂತೆ ಆಸ್ತಿ ರಿಜಿಸ್ಟರ್ ತಿದ್ದಿ, ಖಾತೆ ಬದಲಾಯಿಸಿಕೊಂಡು ದೇವಸ್ಥಾನದ ಜಾಗವನ್ನು ಕಬಳಿಸಲಾಗಿದೆ. ಇದು ಅಕ್ಷಮ್ಯ ಅಪರಾಧ ಎಂದು ಗ್ರಾಮದ ಸಿದ್ದಲಿಂಗೇಶ, ಶೆಟ್ಟೆಪ್ಪ ಹಾಗೂ ಹಾದಿಮನಿಯವರು ದಾಖಲೆ ಸಮೇತ ಎಳಿಎಳಿಯಾಗಿ ಎಲ್ಲವನ್ನೂ ಬಯಲಿಗೆ ತಂದು ದೂರಿದ್ದಾರೆ.
ಹಾಗಾದರೆ ದೇವಸ್ಥಾನಕ್ಕೆ ಸೇರಿದ್ದ ಆ ಅಂದಾಜು 07 ಗುಂಟೆ ಜಾಗ ಎಲ್ಲಿ ಹೋಯಿತು ಎಂಬುದು ಈಗಿನ ಯಕ್ಷಪ್ರಶ್ನೆಯಾಗಿದೆ. ಅಕ್ಕಪಕ್ಕದವರು ಜಾಗವನ್ನು ಕಬಳಿಸಿ, ತಮ್ಮ ಅಣ್ಣತಮ್ಮಂದಿರ ಹೆಸರಿನಲ್ಲಿ ಖಾತೆ ಮಾಡಿಕೊಂಡು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ಜಾಗವನ್ನು ಮಾರಾಟ ಮಾಡಿ ಹಣ ಮಾಡಿಕೊಂಡಿದ್ದಾರೆಯೇ ಎಂಬ ಬಲವಾದ ಅನುಮಾನಗಳು ಎದ್ದಿವೆ. ಈ ಬಗ್ಗೆ ಸತ್ಯಾಸತ್ಯತೆ ಹೊರಬರಬೇಕಾದರೆ ಅಧಿಕಾರಿಗಳ ಕಾರ್ಯವೈಖರಿ ಚುರುಕಾಗಬೇಕಿದೆ.
ಸೂಕ್ತ ತನಿಖೆ ನಡೆದರೆ ಮಾತ್ರ ಈ ಭೂಹಗರಣದ ಹಿಂದಿರುವ ಅಸಲಿ ಸತ್ಯ ಹೊರಬರಲು ಸಾಧ್ಯ. ಒಂದು ವೇಳೆ ಭೂಕಬಳಿಕೆ ಸಾಬೀತಾದರೆ, ಅಂತಹವರ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮ ಜರುಗಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಬೇರೆ ಕೆಲಸದ ನಿಮಿತ್ತ ಕುಬಿಹಾಳ ಗ್ರಾಮಕ್ಕೆ ನಿನ್ನೆ ಭೇಟಿ ನೀಡಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಹಾಗೂ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಅವರ ಮುಂದೆ ಮಳಲಿ ಗ್ರಾಮದ ಸಿದ್ದಲಿಂಗೇಶ ಅವರು ದೇವಸ್ಥಾನದ ಜಾಗದ ಅಳಲು ತೋಡಿಕೊಂಡರು. ವಿಷಯದ ಗಂಭೀರತೆಯನ್ನು ಅರಿತ ನ್ಯಾಯಾಧೀಶರು ಕೂಡಲೇ ತನಿಖೆ ನಡೆಸಿ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಖಡಕ್ ತಾಕೀತು ಮಾಡಿದ್ದರು.
ಆದರೆ ತಾಲೂಕು ಪಂಚಾಯತಿ ಇಒ ಜಗದೀಶ್ ಕಮ್ಮಾರ್ ಅವರಿಗೆ ಮನವಿ ಸಲ್ಲಿಸಿದರೂ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವ ಸೌಜನ್ಯವನ್ನೂ ತೋರಿಲ್ಲ. ಮೇಲಧಿಕಾರಿಗಳಿಗೆ ದೂರು ನೀಡಿದ್ದರೂ ಯಾರೂ ‘ಕ್ಯಾರೇ’ ಎನ್ನುತ್ತಿಲ್ಲ. ದೇವರ ಜಾಗ ಕಬಳಿಸಿದವರನ್ನು ರಕ್ಷಿಸಲು ಅಧಿಕಾರಿಗಳೇ ನಿಂತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದ್ದು, ಕೂಡಲೇ ಜಾಗವನ್ನು ದೇವಸ್ಥಾನದ ಹೆಸರಿಗೆ ಮಾಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಇನ್ನಾದರೂ ನ್ಯಾಯಾಧೀಶರ ಆದೇಶದಂತೆ ಅಧಿಕಾರಿಗಳು ಈ ಕಾರ್ಯ ಕೈಗೆತ್ತಿಕೊಳ್ಳುತ್ತಾರಾ, ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುತ್ತಾರಾ ಅಥವಾ ಆದೇಶವನ್ನೇ ಕಸದ ಬುಟ್ಟಿಗೆ ಹಾಕುತ್ತಾರಾ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ.

