
ನವಲಗುಂದ: ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿರುವ ಪೂರಕ ಪೌಷ್ಟಿಕ ಆಹಾರ ಯೋಜನೆಯಲ್ಲಿ ವ್ಯಾಪಕ ಅಕ್ರಮಗಳು ಹಾಗೂ ಕರ್ತವ್ಯಲೋಪ ನಡೆಯುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಎಮ್. ಯರಗುಪ್ಪಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ಲಿಖಿತ ದೂರು ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಯೋಗದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಆರೋಗ್ಯ ಸುಧಾರಣೆಗಾಗಿ ವಾರದಲ್ಲಿ ಆರು ದಿನ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ಯೋಜನೆ ಜಾರಿಯಲ್ಲಿದೆ. ಆದರೆ, ತಾಲೂಕಿನ ಕೆಲವು ಶಾಲೆಗಳ ಮುಖ್ಯ ಶಿಕ್ಷಕರು ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿ ಮಗುವಿಗೆ ತಿಂಗಳಿಗೆ ಸರಾಸರಿ 168 ರೂ. ವೆಚ್ಚ ಮಾಡಲಾಗುತ್ತಿದ್ದರೂ, ನಿಯಮಾನುಸಾರ ಮಕ್ಕಳಿಗೆ ಪೌಷ್ಟಿಕ ಆಹಾರ ತಲುಪುತ್ತಿಲ್ಲ ಎಂಬ ದೂರುಗಳು ಪಾಲಕರಿಂದ ಕೇಳಿಬರುತ್ತಿವೆ. ಕೆಲ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಹಾಜರಾತಿ ಸಂಖ್ಯೆಯನ್ನು ತಪ್ಪಾಗಿ ತೋರಿಸಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೂಡ ಕೇಳಿಬಂದಿವೆ.
ಇದಲ್ಲದೆ, ಅಕ್ಷರ ದಾಸೋಹ ವಿಭಾಗದ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಸಮರ್ಪಕ ಪರಿಶೀಲನೆ ನಡೆಸುವಲ್ಲಿ ವಿಫಲರಾಗಿದ್ದಾರೆ. ಸಿ.ಆರ್.ಪಿ ಹಾಗೂ ಬಿ.ಆರ್.ಪಿ ಸಿಬ್ಬಂದಿಗಳ ನಿರ್ಲಕ್ಷ್ಯವೇ ಈ ಅವ್ಯವಸ್ಥೆಗೆ ಪ್ರಮುಖ ಕಾರಣವಾಗಿದೆ ಎಂದು ಮಾಬುಸಾಬ ಎಮ್. ಯರಗುಪ್ಪಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದು ಪ್ರಮುಖ ಆರೋಪವೆಂದರೆ, ಕೆಲವು ಮುಖ್ಯ ಶಿಕ್ಷಕರು ಶಾಲೆಯ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ವೈಯಕ್ತಿಕ ಕೆಲಸಗಳಿಗಾಗಿ ಹೊರಹೋಗುತ್ತಿದ್ದು, ಶಾಲೆ ಬಿಡುವ ಸಮಯದಲ್ಲಿ ಮಾತ್ರ ಮರಳಿ ಬರುತ್ತಿದ್ದಾರೆ. ಈ ರೀತಿಯ ವರ್ತನೆ ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲಾ ಅಕ್ರಮಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಒಂದು ವೇಳೆ ಈ ವ್ಯವಸ್ಥೆ ಸರಿಪಡಿಸದಿದ್ದರೆ, ಮಾಹಿತಿ ಹಕ್ಕು ಕಾಯ್ದೆಯಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಮಾಬುಸಾಬ ಯರಗುಪ್ಪಿ ಅವರು ಎಚ್ಚರಿಕೆ ನೀಡಿದ್ದಾರೆ. ಈ ದೂರಿನ ಪ್ರತಿಯನ್ನು ಧಾರವಾಡದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಿಗೂ ಮಾಹಿತಿ ನೀಡಲಾಗಿದೆ.

