ಅಗ್ನಿಪಥ ಯೋಜನೆ: ನವೆಂಬರ್ 13 ರಿಂದ 19 ರವರೆಗೆ ಬಳ್ಳಾರಿಯಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ; ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ

Spread the love

🏃 ಅಗ್ನಿಪಥ ಯೋಜನೆ: ನವೆಂಬರ್ 13 ರಿಂದ 19 ರವರೆಗೆ ಬಳ್ಳಾರಿಯಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ; ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ

ಬಳ್ಳಾರಿ, ನ. 03: ಬೆಂಗಳೂರು ಪ್ರಧಾನ ಕಚೇರಿ ನೇಮಕಾತಿ ವಲಯದಿಂದ ನವೆಂಬರ್ 13 ರಿಂದ 19 ರವರೆಗೆ ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ ಏರ್ಪಡಿಸಲಾಗಿದೆ. 30 ಜೂನ್ 2025 ರಿಂದ 10 ಜುಲೈ 2025 ರವರೆಗೆ ನಡೆಸಲಾದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (CEE) ಅರ್ಹತೆ ಪಡೆದ ಅಭ್ಯರ್ಥಿಗಳನ್ನು ವರ್ಗವಾರು ರ‍್ಯಾಲಿಗೆ ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ನೇಮಕಾತಿ ರ‍್ಯಾಲಿಯಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಗ್ನಿವೀರ್ ಸಾಮಾನ್ಯ ಕರ್ತವ್ಯ (GD) ವರ್ಗಕ್ಕೆ ಅರ್ಜಿ ಸಲ್ಲಿಸಿದವರು ಮತ್ತು ಇತರೆ ಅಗ್ನಿವೀರ್ ವರ್ಗಗಳಿಗೆ (ಟೆಕ್ನಿಕಲ್, ಕ್ಲರ್ಕ್/ಸ್ಟೋರ್ ಕೀಪರ್, ಟ್ರೇಡ್ಸ್‌ಮ್ಯಾನ್ ಹೊರತುಪಡಿಸಿ) ಅರ್ಜಿ ಸಲ್ಲಿಸಿದವರು ಬೆಂಗಳೂರು ಪ್ರಧಾನ ಕಚೇರಿ ವ್ಯಾಪ್ತಿಯಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಗಳಿಗೆ ಸೇರಿರುತ್ತಾರೆ.

ಇದರ ಜೊತೆಗೆ, ಬಹು ವಿಭಾಗಗಳಿಗೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಎಆರ್‌ಓ ಮಂಗಳೂರು ವ್ಯಾಪ್ತಿಯ ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.

ಸೈನ್ಯದಲ್ಲಿನ ಎಲ್ಲಾ ವರ್ಗಗಳ ನೋಂದಣಿಗಾಗಿ ಈ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಸೇನೆಯಲ್ಲಿ ನಿರ್ದಿಷ್ಟಪಡಿಸಿದ ವಿಭಾಗಗಳಲ್ಲಿ ದಾಖಲಾತಿಗಾಗಿ ವಯಸ್ಸು, ಶಿಕ್ಷಣ ಅರ್ಹತೆ ಮತ್ತು ಇತರ ಮಾನದಂಡಗಳ ವಿವರಗಳನ್ನು 12 ಮಾರ್ಚ್ 2025 ರಂದು ಪ್ರಕಟಿಸಲಾದ ಅಧಿಕೃತ ಅಧಿಸೂಚನೆಯ ಪ್ರಕಾರ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಹಾಗೂ ಪ್ರವೇಶ ಕಾರ್ಡ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಅವರ ಇಮೇಲ್‌ಗೆ ರವಾನಿಸಲಾಗಿದೆ. ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಖಾತೆ ಮತ್ತು ನೋಂದಾಯಿತ ಇಮೇಲ್ ಐಡಿಯನ್ನು ಲಾಗಿನ್ ಮಾಡುವ ಮೂಲಕ ಭಾರತೀಯ ಸೇನೆಯ ವೆಬ್‌ಸೈಟ್‌ನಲ್ಲಿಯೂ ಸಹ ಪ್ರವೇಶ ಕಾರ್ಡ್‌ಗಳನ್ನು ಪಡೆಯಬಹುದು ಎಂದು ಸ್ಪಷ್ಟಪಡಿಸಲಾಗಿದೆ.

ಅಭ್ಯರ್ಥಿಗಳು ಯಾವುದೇ ವಂಚಕರು ಅಥವಾ ಮಧ್ಯವರ್ತಿಗಳಿಗೆ ಕಿವಿಗೊಡಬಾರದು ಎಂದು ಪ್ರಕಟಣೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ನೇಮಕಾತಿ ರ‍್ಯಾಲಿಯ ಸಮಯದಲ್ಲಿ ನಡೆಸುವ ಪರೀಕ್ಷೆಗಳು ಹಾಗೂ ಅಂತಿಮ ಅರ್ಹತೆಯ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *