ಧಾರವಾಡ: ಮರಾಠ ಸಮುದಾಯದ ಜನರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮವು 2025-26ನೇ ಸಾಲಿನಲ್ಲಿ ‘ಆಹಾರ ವಾಹಿನಿ’ (ಆಹಾರ ಕಿಯೋಸ್ಕ್) ಯೋಜನೆಯಡಿ ಸೌಲಭ್ಯ ನೀಡಲು ಮುಂದಾಗಿದ್ದು, ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ಹೊಂದಿರುವ ನಾಲ್ಕು ಚಕ್ರದ ಇ-ಗೂಡ್ಸ್ ವಾಹನಗಳನ್ನು ನವೀಕರಿಸಿ ಫಲಾನುಭವಿಗಳಿಗೆ ವಿತರಿಸಲಾಗುವುದು. ಈ ವಾಹನ ಖರೀದಿಗೆ ನಿಗಮದಿಂದ 3 ಲಕ್ಷ ರೂಪಾಯಿಗಳವರೆಗೆ ಭಾರಿ ಸಹಾಯಧನ ನೀಡಲಾಗುತ್ತಿದ್ದು, ಉಳಿಕೆ ಮೊತ್ತವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಮೂಲಕ ಸಾಲದ ರೂಪದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ-3ಬಿ ಅಡಿಯಲ್ಲಿ ಬರುವ ಮರಾಠ ಸಮುದಾಯದ ಜನರಿಗೆ ಮಾತ್ರ ಅನ್ವಯವಾಗುತ್ತದೆ. ಜಿಲ್ಲೆಯ ಕುಂದಗೋಳ, ಧಾರವಾಡ, ಕಲಘಟಗಿ, ಹುಬ್ಬಳ್ಳಿ-ಧಾರವಾಡ ಪೂರ್ವ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರಗಳ ನಗರ ಪ್ರದೇಶದ ನಿವಾಸಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಯೋಜನೆಯ ಲಾಭ ಪಡೆಯಲು ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 3 ಲಕ್ಷ ರೂಪಾಯಿಗಳ ಮಿತಿಯೊಳಗಿರಬೇಕು ಹಾಗೂ ವಯಸ್ಸು 21 ರಿಂದ 45 ವರ್ಷಗಳ ಒಳಗಿರಬೇಕು. ಒಂದು ಕುಟುಂಬದಿಂದ ಒಬ್ಬ ಸದಸ್ಯರು ಮಾತ್ರ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ ಎಂದು ನಿಗಮ ಸ್ಪಷ್ಟಪಡಿಸಿದೆ.
ಆಸಕ್ತ ಮರಾಠ ಸಮುದಾಯದ ಅರ್ಜಿದಾರರು ಮಾರ್ಚ್ 5, 2026ರ ಒಳಗಾಗಿ ಸೇವಾ ಸಿಂಧು ಪೋರ್ಟಲ್, ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ಜಾಲತಾಣ https://kmcdc.karnataka.gov.in ಗೆ ಭೇಟಿ ನೀಡಬಹುದು ಅಥವಾ ಜಿಲ್ಲಾ ಕಚೇರಿಯ ದೂರವಾಣಿ ಸಂಖ್ಯೆ 0836-2957829 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

