ಧಾರವಾಡ: ಹಿಂದುಳಿದ ವರ್ಗಗಳ ಜನರ ಆರ್ಥಿಕ ಸಬಲೀಕರಣಕ್ಕಾಗಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2025-26ನೇ ಸಾಲಿನಲ್ಲಿ ‘ಆಹಾರ ವಾಹಿನಿ’ (ಆಹಾರ ಕಿಯೋಸ್ಕ್) ಯೋಜನೆಯಡಿ ಸೌಲಭ್ಯ ನೀಡಲು ಮುಂದಾಗಿದ್ದು, ಅರ್ಹ ಫಲಾನುಭವಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ಹೊಂದಿರುವ ನಾಲ್ಕು ಚಕ್ರದ ಇ-ಗೂಡ್ಸ್ ವಾಹನಗಳನ್ನು ವಿತರಿಸಲಾಗುವುದು. ವಾಹನ ಖರೀದಿಗೆ ನಿಗಮದಿಂದ 3 ಲಕ್ಷ ರೂಪಾಯಿಗಳವರೆಗೆ ಸಹಾಯಧನ ನೀಡಲಾಗುತ್ತಿದ್ದು, ಉಳಿಕೆ ಮೊತ್ತವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಮೂಲಕ ಸಾಲದ ರೂಪದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ-1 ಮತ್ತು 2ಎ ಅಡಿಯಲ್ಲಿ ಬರುವ ಸಮುದಾಯಗಳಿಗೆ ಅನ್ವಯವಾಗುತ್ತದೆ (ಮರಾಠ, ಲಿಂಗಾಯತ, ವಿಶ್ವಕರ್ಮ, ಉಪ್ಪಾರ, ಅಂಬಿಗ, ಅಲೆಮಾರಿ, ಒಕ್ಕಲಿಗ, ಮಡಿವಾಳ ಹಾಗೂ ಸವಿತಾ ಸಮಾಜದವರನ್ನು ಹೊರತುಪಡಿಸಿ). ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡ ಪೂರ್ವ ಮತ್ತು ಸೆಂಟ್ರಲ್ ವಿಧಾನಸಭಾ ಕ್ಷೇತ್ರಗಳ ನಗರ ಪ್ರದೇಶದ ನಿವಾಸಿಗಳಿಗೆ ಈ ಸೌಲಭ್ಯ ಲಭ್ಯವಿದೆ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 3 ಲಕ್ಷ ರೂಪಾಯಿಗಳ ಮಿತಿಯೊಳಗಿರಬೇಕು ಹಾಗೂ ವಯಸ್ಸು 21 ರಿಂದ 45 ವರ್ಷಗಳ ಒಳಗಿರಬೇಕು. ಒಂದು ಕುಟುಂಬದಿಂದ ಒಬ್ಬ ಸದಸ್ಯರು ಮಾತ್ರ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಆಸಕ್ತರು ಮಾರ್ಚ್ 04, 2026ರ ಒಳಗಾಗಿ ಸೇವಾ ಸಿಂಧು ಪೋರ್ಟಲ್, ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ಜಾಲತಾಣ https://dbcdc.karnataka.gov.in ಅಥವಾ ಜಿಲ್ಲಾ ಕಚೇರಿಯ ದೂರವಾಣಿ ಸಂಖ್ಯೆ 0836-2957829 ಗೆ ಸಂಪರ್ಕಿಸಲು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಪ್ರಗತಿ ಸಾಧಿಸಲು ಬಯಸುವ ಹಿಂದುಳಿದ ವರ್ಗಗಳ ಯುವಜನತೆಗೆ ಇದೊಂದು ಉತ್ತಮ ಅವಕಾಶವಾಗಿದೆ.

