
ಹುಬ್ಬಳ್ಳಿ: ವಚನ ಸಾಹಿತ್ಯ ಇಂದಿಗೂ ಜೀವಂತವಾಗಿದೆ. ವಚನಗಳಂತೆ ಬದುಕನ್ನು ರೂಪಿಸಿಕೊಳ್ಳಬೇಕು. ರಾಜಕಾರಣ ಸೃಷ್ಟಿಸುತ್ತಿರುವ ಜಾತಿ ಮತ್ತು ಧರ್ಮಗಳ ಕಿತ್ತಾಟದಿಂದ ದೂರವಿರಬೇಕು ಎಂದು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಬಸವರಾಜ ಸಾದರ ಹೇಳಿದರು.
ರವಿವಾರ ನಗರದ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಿದ್ದ ಡಾ. ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ನೀಡಲಾದ ರಾಜ್ಯಮಟ್ಟದ ‘ಸಂಗಮ ಸಿರಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಡಾ. ಸಂಗಮೇಶ ಹಂಡಗಿ ಹಾಗೂ ಅವರ ತಲೆಮಾರಿನವರು ಆದರ್ಶ ಬದುಕು ಸಾಗಿಸಿದ್ದಾರೆ. ಇಂತಹ ಸಾಧಕರನ್ನು ಸದಾ ನೆನಪಿಸಿಕೊಳ್ಳಬೇಕು. ಹಿರಿಯರು ಹಾಗೂ ಸಾಧಕರನ್ನು ಇಂತಹ ಕಾರ್ಯಕ್ರಮಗಳ ಮೂಲಕ ಸ್ಮರಿಸಬೇಕು ಎಂದು ಹೇಳಿದರು.
ಜಗತ್ತಿಗೆ ನೋವಾದರೆ ಅದಕ್ಕೆ ಪರಿಹಾರ ಸೂಚಿಸುವ ಶಕ್ತಿ ವಚನ ಸಾಹಿತ್ಯಕ್ಕಿದೆ. ವಚನಗಳಂತೆ ಬದುಕನ್ನು ರೂಪಿಸಿಕೊಳ್ಳದಿದ್ದರೆ ಶರಣರನ್ನು ನಾವೇ ಸಾಯಿಸಿದಂತೆ ಎಂದು ಡಾ. ಬಸವರಾಜ ಸಾದರ ಅಭಿಪ್ರಾಯಪಟ್ಟರು.

ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಅವರು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿ, ಮನುಷ್ಯನಿಗೆ ಮಾನವ ಮೌಲ್ಯಗಳು ಅತ್ಯಂತ ಮುಖ್ಯ. ಪ್ರತಿಯೊಬ್ಬರೂ ಸಮಾಜದ ಋಣ ತೀರಿಸಬೇಕು. ಬಸವಣ್ಣನವರು ಸೇರಿದಂತೆ ಎಲ್ಲಾ ವಚನಕಾರರನ್ನು ಇನ್ನಷ್ಟು ಆಳವಾಗಿ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.
ವಚನಗಳಲ್ಲಿರುವ ವೈಜ್ಞಾನಿಕ ತಳಹದಿಯನ್ನು ಆಧರಿಸಿ ಉಪನ್ಯಾಸಗಳು ನಡೆಯಬೇಕು. ಬಸವಣ್ಣನವರು ವೈಜ್ಞಾನಿಕ ವಿಚಾರಗಳನ್ನು ನೇರವಾಗಿ ಹೇಳಿದ್ದಾರೆ. ಆದರೆ ಅವುಗಳನ್ನು ಅರಿಯುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ವಚನಗಳನ್ನು ಅರ್ಥೈಸಿಕೊಳ್ಳಲು ಪಂಡಿತರಾಗಬೇಕಿಲ್ಲ, ಆದರೆ ಅವುಗಳನ್ನು ತಿಳಿದುಕೊಳ್ಳುವ ತಾಳ್ಮೆ ಮತ್ತು ವ್ಯವಧಾನ ಅಗತ್ಯವೆಂದು ಹೇಳಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, 46 ಕೃತಿಗಳನ್ನು ರಚಿಸಿರುವ ಸಂಗಮೇಶ ಹಂಡಗಿ ಅವರು ಇಂದಿಗೂ ಮುಂದಿನ ದಿನಗಳಲ್ಲೂ ಜೀವಂತವಾಗಿರುತ್ತಾರೆ. ಅವರು ಆರಂಭಿಸಿದ ಕಾರ್ಯವನ್ನು ಅವರ ಕುಟುಂಬ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ತಂದೆಯ ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಾ. ಬಂಡು ಕುಲಕರ್ಣಿ ಮಾತನಾಡಿ, ಇಂದಿನ ದಿನಮಾನದಲ್ಲಿ ಸಾಹಿತ್ಯ ಚಟುವಟಿಕೆ ಅತ್ಯಂತ ಅಗತ್ಯ. ಹಂಡಗಿ ಸಾಹಿತ್ಯ ಪ್ರತಿಷ್ಠಾನ ರಾಜ್ಯಮಟ್ಟದಲ್ಲಿ ನೀಡುತ್ತಿರುವ ಪ್ರಶಸ್ತಿ ರಾಷ್ಟ್ರಮಟ್ಟಕ್ಕೆ ಬೆಳೆಯಲಿ. ಇನ್ನಷ್ಟು ಸಾಹಿತ್ಯ ಚಟುವಟಿಕೆಗಳು ನಡೆಯಲಿ ಎಂದು ಆಶಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿ, ಸಾಹಿತಿ ಮತ್ತು ಸಾಹಿತ್ಯಕ್ಕೆ ಸಾವಿಲ್ಲ. ನಡೆ-ನುಡಿ ಒಂದಾಗಿರಬೇಕು. ಸ್ವಚ್ಛ ಸಮಾಜ ನಿರ್ಮಾಣವಾಗಬೇಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಂಗಮೇಶ ಹಂಡಗಿ ಅವರ ಕೃತಿಗಳನ್ನು ಮರುಮುದ್ರಣ ಮಾಡುವ ಕಾರ್ಯಕ್ಕೆ ಕೈಹಾಕಲಾಗುವುದು ಎಂದು ತಿಳಿಸಿದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ಮಾತನಾಡಿ, ಪ್ರತಿವರ್ಷವೂ ಪಾರದರ್ಶಕವಾಗಿ ಪ್ರಶಸ್ತಿ ಆಯ್ಕೆ ಮಾಡಲಾಗುತ್ತಿದೆ. ಬಂದಿರುವ ಕೃತಿಗಳಲ್ಲಿ ಪ್ರಾಮಾಣಿಕವಾಗಿ ಆಯ್ಕೆ ನಡೆಯುತ್ತದೆ. ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಹಂಡಗಿ ಪ್ರತಿಷ್ಠಾನ ಸದಾ ಕಾರ್ಯನಿರ್ವಹಿಸುತ್ತದೆ ಎಂದರು.
ರಾಯನಾಳ ರೇವಣಸಿದ್ದೇಶ್ವರ ಮಠದ ಶ್ರೀ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಸಂಗೀತ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಬಸವಣ್ಣನವರು ಸಾರಿದ ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಧರ್ಮವನ್ನು ಪ್ರತಿಯೊಬ್ಬರೂ ಆಚರಿಸಬೇಕು. ಸತ್ಕಾರ್ಯಗಳನ್ನು ರೂಢಿಸಿಕೊಳ್ಳಬೇಕು. ಸಣ್ಣಪುಟ್ಟ ಬದಲಾವಣೆಗಳ ಮೂಲಕ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಮಹಾಂತಪ್ಪ ನಂದೂರು ಮಾತನಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ವೀರೇಶ ಹಂಡಗಿ ಸ್ವಾಗತಿಸಿದರು. ಡಾ. ಬಿ.ಎಸ್. ಮಾಳವಾಡ ಪರಿಚಯಿಸಿದರು. ಪ್ರೊ. ಗುರು ಹಂಜಗಿಮಠ ನಿರೂಪಿಸಿದರು. ರವೀಂದ್ರ ರಾಮದುರ್ಗಕರ್ ವಂದಿಸಿದರು.

