ಉತ್ತರ ಪ್ರದೇಶದ ಪ್ರಗತಿಗೆ ಹೊಸ ರೆಕ್ಕೆ: ಜೇವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

Spread the love

ಜೇವರ್ (ಗೌತಮಬುದ್ಧ ನಗರ): ರಾಷ್ಟ್ರ ರಾಜಧಾನಿ ವಲಯದ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಉತ್ತರ ಪ್ರದೇಶದ ಹೆಮ್ಮೆಯ ಯೋಜನೆಯಾದ ‘ನೋಯ್ಡಾ ಇಂಟರ್ನ್ಯಾಷನಲ್ ಏರ್ಪೋರ್ಟ್’ (NIA) ಮೊದಲ ಹಂತಕ್ಕೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಈ ಮೂಲಕ ಅತಿ ಹೆಚ್ಚು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರ ಪ್ರದೇಶ ಪಾತ್ರವಾಗಿದ್ದು, ರಾಜ್ಯದ ಅಭಿವೃದ್ಧಿ ಪಥದಲ್ಲಿ ಹೊಸ ಇತಿಹಾಸ ಬರೆಯಲಾಗಿದೆ.

​ಸಮಾರಂಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಈ ವಿಮಾನ ನಿಲ್ದಾಣವು ಕೇವಲ ಪ್ರಯಾಣಕ್ಕೆ ಸೀಮಿತವಾಗಿರದೆ ಆಗ್ರಾ, ಮಥುರಾ, ಅಲಿಗಢ, ಗಾಜಿಯಾಬಾದ್ ಮತ್ತು ಮೀರತ್ ಸೇರಿದಂತೆ ಇಡೀ ಪಶ್ಚಿಮ ಉತ್ತರ ಪ್ರದೇಶದ ರೈತರು, ಸಣ್ಣ ಉದ್ಯಮಿಗಳು ಹಾಗೂ ಯುವಜನತೆಗೆ ಅಪಾರ ಅವಕಾಶಗಳನ್ನು ಹೊತ್ತು ತರಲಿದೆ ಎಂದು ತಿಳಿಸಿದರು. ಇದೇ ವೇಳೆ ಹಿಂದಿನ ಸರ್ಕಾರಗಳ ವಿಳಂಬ ನೀತಿಯನ್ನು ಟೀಕಿಸಿದ ಅವರು, 2003ರಲ್ಲೇ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಅನುಮೋದನೆಗೊಂಡಿದ್ದ ಈ ಯೋಜನೆ, ಕಾಂಗ್ರೆಸ್ ಮತ್ತು ಅಂದಿನ ಪ್ರಾದೇಶಿಕ ಸರ್ಕಾರಗಳ ನಿರ್ಲಕ್ಷ್ಯದಿಂದ ಕೇವಲ ಕಾಗದದ ಮೇಲೆ ಉಳಿದಿತ್ತು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರವಷ್ಟೇ ಈ ಕನಸು ನನಸಾಗಿದೆ ಎಂದು ಕಿಡಿಕಾರಿದರು.

​ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ಈ ವಿಮಾನ ನಿಲ್ದಾಣವು ಸರ್ಕಾರದ ಸಂಕಲ್ಪವನ್ನು ಸಿದ್ಧಿಯನ್ನಾಗಿ ಪರಿವರ್ತಿಸಿದ ಶಕ್ತಿಯುತ ಫಲಿತಾಂಶವಾಗಿದೆ. ಇದು ರಾಜ್ಯದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಆಧಾರ ಸ್ತಂಭವಾಗುವುದಲ್ಲದೆ, ಹೂಡಿಕೆ ಮತ್ತು ಕೈಗಾರಿಕಾ ಅಭಿವೃದ್ಧಿಗೆ ವೇಗ ನೀಡಿ ವ್ಯಾಪಕ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂದರು. ಸುಮಾರು 11,200 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ವಿಟ್ಟರ್ಲೆಂಡ್‌ನ ಜ್ಯೂರಿಚ್ ಏರ್‌ಪೋರ್ಟ್‌ ಇಂಟರ್‌ನ್ಯಾಷನಲ್ ಎಜಿ ಸಂಸ್ಥೆಯು ಈ ಬೃಹತ್ ನಿಲ್ದಾಣವನ್ನು ಅತ್ಯಾಧುನಿಕವಾಗಿ ನಿರ್ಮಿಸಿದೆ.

​ಈ ಐತಿಹಾಸಿಕ ಕ್ಷಣಕ್ಕೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಈ ವಿಮಾನ ನಿಲ್ದಾಣವು ಉತ್ತರ ಪ್ರದೇಶದ ಉಜ್ವಲ ಭವಿಷ್ಯದ ‘ಲಾಂಚ್ ಪ್ಯಾಡ್’ ಆಗಿ ಕಾರ್ಯನಿರ್ವಹಿಸಲಿದೆ ಎಂದು ಗಣ್ಯರು ಹರ್ಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *