
ಹನೂರು: ಮುಂಬರುವ ರಾಜ್ಯ ಬಜೆಟ್‌ನಲ್ಲಿ ಹನೂರು ಕ್ಷೇತ್ರದ ರೈತಾಪಿ ವರ್ಗ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರವು ಮಹತ್ವದ ಕೊಡುಗೆಗಳನ್ನು ನೀಡಲಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಲಿದೆ ಎಂದು ಮಾಜಿ ಶಾಸಕ ಆರ್. ನರೇಂದ್ರ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ತಾವು ಯಶಸ್ವಿಯಾಗಿದ್ದು, ಈ ಬಾರಿಯ ಆಯವ್ಯಯದಲ್ಲಿ ಪೂರಕ ಸ್ಪಂದನೆ ಸಿಗುವ ನಿರೀಕ್ಷೆಯಿದೆ ಎಂದರು. ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಉಸ್ತುವಾರಿ ಸಚಿವರು ಹಾಗೂ ಸಂಸದರು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಹಿಂದೆ ತಮ್ಮ ಅವಧಿಯಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಗೆ ಹೆಚ್ಚಿನ ವೇಗ ನೀಡಲಾಗುವುದು ಎಂದು ಭರವಸೆ ನೀಡಿದರು.
ಕ್ಷೇತ್ರದ ಕಾಡಂಚಿನ ಭಾಗಗಳಲ್ಲಿ ವನ್ಯಪ್ರಾಣಿಗಳ ಹಾವಳಿ ದಿನೇ ದಿನೆ ಹೆಚ್ಚುತ್ತಿದೆ. ವಿಶೇಷವಾಗಿ ಚೆಂಗಡಿ ಗ್ರಾಮದಲ್ಲಿ ಹುಲಿಗಳ ಸಂಚಾರ ಹಾಗೂ ಕಾಡಾನೆಗಳಿಂದ ಬೆಳೆ ನಾಶವಾಗಿರುವುದು ಆತಂಕಕಾರಿ ವಿಚಾರ. ಬೆಳೆ ಹಾನಿಗೆ ಸರ್ಕಾರ ನೀಡುವ ಪ್ರಸ್ತುತ ಪರಿಹಾರ ಧನವು ರೈತರ ಬಿತ್ತನೆ ವೆಚ್ಚಕ್ಕೂ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಒಂದು ಹೆಕ್ಟೇರ್‌ಗೆ ನೀಡುವ ಪರಿಹಾರ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.
ತಮ್ಮ ಒಂಬತ್ತು ವರ್ಷಗಳ ಸತತ ಹೋರಾಟದ ಫಲವಾಗಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇಂದು ನನಸಾಗುವ ಹಂತದಲ್ಲಿದೆ. ರೈತ ಸಂಘಟನೆಗಳ ಹೋರಾಟ ಹಾಗೂ ಶ್ರಮದ ಫಲವಾಗಿ ಸುಮಾರು 190 ಕೋಟಿ ರೂ.ಗಳ ಬಜೆಟ್ ಯೋಜನೆಗೆ ಕಾಲ ಕೂಡಿ ಬಂದಿದೆ. ಈ ಯೋಜನೆ ಜಾರಿಯಾದರೆ ರೈತರ ಪ್ರತಿಭಟನೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಇಂಜಿನಿಯರ್ ಮಹೇಶ್ ಸೇರಿದಂತೆ ತಾಂತ್ರಿಕ ತಂಡವು ಅಜ್ಜಿಪುರದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ನೀರಿನ ಹರಿವಿಗೆ ಇರುವ ಅಡಚಣೆ ನಿವಾರಿಸಲು ಶ್ರಮಿಸುತ್ತಿದೆ ಎಂದು ಮಾಹಿತಿ ನೀಡಿದರು.
ಇನ್ನು ಗುಂಡಾಲ್ ಜಲಾಶಯದಲ್ಲಿ ನೀರಿನ ಕೊರತೆ ಇರುವ ಕಾರಣ ಹುಬ್ಬೆಹುಣಸೆ ಕೆರೆಗೆ ನೀರು ಹರಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರ ಬದಲಾಗಿ ಬಲದಂಡೆ ಮತ್ತು ಎಡದಂಡೆ ನಾಲೆಗಳ ಮೂಲಕ ಬಂಡಳ್ಳಿ ಭಾಗದ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ದಂಟಳ್ಳಿ ಹಾಗೂ ಆಲೇರಿ ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಹಿಂದಿನ ಅವಧಿಯಲ್ಲಿ ತಾವು ಮಾಡಿದ ಅಭಿವೃದ್ಧಿ ಕೆಲಸಗಳ ಮುಂದುವರಿದ ಭಾಗವಾಗಿ ಇಂದಿನ ಯೋಜನೆಗಳು ರೂಪುಗೊಂಡಿವೆ ಎಂದು ನರೇಂದ್ರ ವಿವರಿಸಿದರು.
ಈ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಪ್ರಮುಖರಾದ ಮಧುವನಳ್ಳಿ ಶಿವಕುಮಾರ್, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಗಿರೀಶ್, ಹರೀಶ್, ಮಾದೇಶ್ ಹಾಗೂ ಮುಖಂಡ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಬಂಗಾರಪ್ಪ. ಸಿ.

