ಸ್ವಾವಲಂಬಿ ಬದುಕಿಗೆ ಕೌಶಲ್ಯ ತರಬೇತಿ ಅಗತ್ಯ: ಅಣ್ಣಿಗೇರಿಯಲ್ಲಿ ಬ್ಯೂಟಿ ಪಾರ್ಲರ್ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

Spread the love

ಅಣ್ಣಿಗೇರಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದ್ದು, ಪ್ರತಿಯೊಬ್ಬ ಮಹಿಳೆಯು ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಎಂದು ಅಣ್ಣಿಗೇರಿಯ ಆದಿಕವಿ ಪಂಪ ಕನ್ನಡ ಬಳಗದ ಅಧ್ಯಕ್ಷ ವೀರೇಶ್ ಎಸ್. ಕುಬಸದ ಕರೆ ನೀಡಿದರು. ಶೇಷಾದ್ರಿ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರದ ಸಮಾರೋಪ ಹಾಗೂ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

​ಮಹಿಳೆಯರು ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ತಾವು ಕಲಿತ ವಿದ್ಯೆ ಹಾಗೂ ಕೌಶಲ್ಯಗಳನ್ನು ಜೀವನದಲ್ಲಿ ಯಶಸ್ವಿಯಾಗಲು ತೊಡಗಿಸಿಕೊಳ್ಳಬೇಕು. ಶಿಕ್ಷಣ ಮತ್ತು ತರಬೇತಿಯು ಕೇವಲ ಪ್ರಮಾಣ ಪತ್ರಕ್ಕೆ ಸೀಮಿತವಾಗದೆ, ತಾವು ಕಲಿತ ವಿದ್ಯೆಯನ್ನು ಮತ್ತೊಬ್ಬರಿಗೆ ಕಲಿಸಿ ಪ್ರೇರಣೆಯಾಗುವಂತಹ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಮಹಿಳೆಯರನ್ನು ಉದ್ದೇಶಿಸಿ ತಿಳಿಸಿದರು. ಸಂಸ್ಥೆಯ ಮುಖ್ಯಸ್ಥರಾದ ದಸರತ್ ಕೋಟಿ ಅವರು ಮಾತನಾಡಿ, ಮಹಿಳಾ ಸಬಲೀಕರಣಕ್ಕಾಗಿ ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ತರಬೇತಿಯ ಮಹತ್ವವನ್ನು ವಿವರಿಸಿದರು.

​ಇದೇ ಸಂದರ್ಭದಲ್ಲಿ ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ನಂತರ ತರಬೇತಿದಾರರಿಗೆ ಹಾಗೂ ಶಿಬಿರಾರ್ಥಿಗಳಿಗೆ ಅಧಿಕೃತ ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಕಾಶ್ ಎಂ., ಹನೀಫ್ ಸರ್, ತರಬೇತಿದಾರರಾದ ದೀಪಾ ಎಸ್. ಮಂಟೂರ್, ಸುಶೀಲಾ ಹಿರೇಮಠ ಹಾಗೂ ಉಮಾ ಕಣವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *