ಪ್ರವಾಹ ಸಂತ್ರಸ್ತರಿಗೆ ಸಿಎಂ ಬಂಪರ್ ಪ್ಯಾಕೇಜ್: NDRF ಜೊತೆಗೆ ಹೆಕ್ಟೇರ್‌ಗೆ ಹೆಚ್ಚುವರಿ ₹8,500 ಪರಿಹಾರ!

Spread the love

ಕಲಬುರ್ಗಿ:ರಾಜ್ಯದ ಪ್ರವಾಹದಿಂದ ಸಂಕಷ್ಟದಲ್ಲಿರುವ ರೈತರಿಗೆ ಮತ್ತು ಜನಸಾಮಾನ್ಯರಿಗೆ ನೆರವಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ಸೆ. 30) ಬೃಹತ್ ಹೆಚ್ಚುವರಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ (NDRF) ಮಾನದಂಡದ ಪರಿಹಾರದ ಜೊತೆಗೆ ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್‌ಗೆ ₹8,500 ಹೆಚ್ಚುವರಿ ನೆರವು ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕಲಬುರಗಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಈ ಹೆಚ್ಚುವರಿ ನೆರವಿನಿಂದ ರೈತರಿಗೆ ದ್ವಿಗುಣ ಪರಿಹಾರ ಸಿಗಲಿದೆ ಎಂದರು.

ಪರಿಹಾರದ ಸಂಪೂರ್ಣ ವಿವರ: ಸಿಎಂ ಘೋಷಿಸಿದ ಪರಿಹಾರದ ವಿವರ ಇಂತಿದೆ

ಬೆಳೆಯ ವಿಧ NDRF ಮಾನದಂಡದ ಪರಿಹಾರ (ಪ್ರತಿ ಹೆಕ್ಟೇರ್‌ಗೆ) ರಾಜ್ಯದ ಹೆಚ್ಚುವರಿ ಪರಿಹಾರ (ಪ್ರತಿ ಹೆಕ್ಟೇರ್‌ಗೆ) ಒಟ್ಟು ಪರಿಹಾರ (ಪ್ರತಿ ಹೆಕ್ಟೇರ್‌ಗೆ)

ಕುಷ್ಕಿ ಜಮೀನು ₹8,500 ₹8,500 ₹17,000
ನೀರಾವರಿ ಜಮೀನು ₹17,000 ₹8,500 ₹25,500
ಬಹುವಾರ್ಷಿಕ ಬೆಳೆ ₹22,500 ₹8,500 ₹31,000

“NDRF ಮತ್ತು ರಾಜ್ಯ ಸರ್ಕಾರದ ಈ ವಿಶೇಷ ಪ್ಯಾಕೇಜ್ ಸೇರಿ ಒಟ್ಟಾರೆ ₹2,000 ದಿಂದ ₹2,500ಕ್ಕೂ ಹೆಚ್ಚು ಕೋಟಿ ಹಣವನ್ನು ಪರಿಹಾರ ರೂಪದಲ್ಲಿ ನೀಡುತ್ತಿದ್ದೇವೆ. ಸಮೀಕ್ಷೆ ಪೂರ್ಣಗೊಂಡ ತಕ್ಷಣವೇ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗುವುದು,” ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಉತ್ತರ ಕರ್ನಾಟಕಕ್ಕೆ ಮಹಾಹಾನಿ: ಶೇ. 95 ರಷ್ಟು ಬೆಳೆ ನಾಶ
ಕೃಷ್ಣಾ ನದಿಯಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮತ್ತು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ಹಿಂದೆಂದೂ ಕಾಣದಷ್ಟು ಸಂಕಷ್ಟಕ್ಕೆ ಸಿಲುಕಿವೆ ಎಂದು ಮುಖ್ಯಮಂತ್ರಿಗಳು ವಿಷಾದ ವ್ಯಕ್ತಪಡಿಸಿದರು.

ಬೆಳೆಹಾನಿ ಅಂದಾಜು: ರಾಜ್ಯದಲ್ಲಿ ಈವರೆಗೆ ಪ್ರಾಥಮಿಕ ಅಂದಾಜಿನ ಪ್ರಕಾರ 9,60,578 ಹೆಕ್ಟೇರುಗಳಷ್ಟು ಬೆಳೆ ಹಾನಿ ಸಂಭವಿಸಿದೆ. ಇದರಲ್ಲಿ ಶೇ. 95ರಷ್ಟು ಹಾನಿ ಕೇವಲ ಎಂಟು ಜಿಲ್ಲೆಗಳಲ್ಲಿ (ವಿಜಯಪುರ, ಬಾಗಲಕೋಟೆ, ಯಾದಗಿರಿ, ಬೀದರ್, ರಾಯಚೂರು, ಗದಗ, ಕಲಬುರಗಿ, ಧಾರವಾಡ) ಆಗಿದೆ.

ಮಳೆ ಪ್ರಮಾಣ: ಜೂನ್ 1 ರಿಂದ ಸೆಪ್ಟೆಂಬರ್ 29ರ ವರೆಗೆ ವಾಡಿಕೆಗಿಂತ ಶೇ. 4ರಷ್ಟು ಹೆಚ್ಚು ಮಳೆಯಾಗಿದೆ. ಆದರೆ, ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ. 22ರಷ್ಟು ಅಧಿಕ ಮಳೆ ಸುರಿದಿದೆ.

ಬೆಳೆ ಕೊಳೆತ: “ನಿರಂತರ ಮಳೆಯಿಂದಾಗಿ ತೊಗರಿ, ಹತ್ತಿ, ಈರುಳ್ಳಿ ಮುಂತಾದ ಒಣ ಹವೆಯ ಬೆಳೆಗಳು ಕೊಳೆಯಲಾರಂಭಿಸಿವೆ. ಹೊಲಗಳಲ್ಲಿ ತೇವಾಂಶ ಹೆಚ್ಚಿರುವ ಕಾರಣ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲು ವಿಳಂಬವಾಗುತ್ತಿದೆ,” ಎಂದು ಸಿಎಂ ಮಾಹಿತಿ ನೀಡಿದರು.

ಮನೆ ಹಾನಿ, ಸಾವು-ನೋವಿಗೆ ಪರಿಹಾರ ವಿತರಣೆ
ಪ್ರವಾಹ ಪೀಡಿತ ನಾಲ್ಕು ಜಿಲ್ಲೆಗಳ (ಕಲಬುರಗಿ, ವಿಜಯಪುರ, ಯಾದಗಿರಿ) ಪರಿಸ್ಥಿತಿ ಅವಲೋಕಿಸಿದ ಸಿಎಂ, ಈ ಜಿಲ್ಲೆಗಳಲ್ಲಿ ಒಟ್ಟು 117 ಗ್ರಾಮಗಳು ಸಂಕಷ್ಟದಲ್ಲಿವೆ. 80 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿ 10,576 ಜನರಿಗೆ ಆಶ್ರಯ ನೀಡಲಾಗಿದೆ.

ಮೃತರಿಗೆ ಪರಿಹಾರ: ರಾಜ್ಯದಲ್ಲಿ ಮಳೆ ಹಾನಿಯಿಂದಾಗಿ 52 ಮಂದಿ ಮರಣ ಹೊಂದಿದ್ದು, ಸೆಪ್ಟೆಂಬರ್ 28ರವರೆಗಿನ ಎಲ್ಲಾ ಸಾವುಗಳ ವಾರಸುದಾರರಿಗೆ ಪರಿಹಾರ ನೀಡಲಾಗಿದೆ.

ಜಾನುವಾರು ನಷ್ಟ: ಒಟ್ಟು 422 ಜಾನುವಾರುಗಳು ಮರಣ ಹೊಂದಿದ್ದು (ಯಾದಗಿರಿಯಲ್ಲಿ ಮಾತ್ರ 245), 407 ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ.

ಮನೆ ಹಾನಿ ಪರಿಹಾರ: ಪೂರ್ಣ ಹಾನಿಗೊಳಗಾದ 547 ಮನೆಗಳಿಗೆ ತಲಾ ₹1.20 ಲಕ್ಷ ಪರಿಹಾರ ನೀಡಲಾಗಿದೆ. ಮನೆಗಳನ್ನು ಕಳೆದುಕೊಂಡವರಿಗೆ ಒಟ್ಟಾರೆ ಇದುವರೆಗೆ ₹23.12 ಕೋಟಿ ಮತ್ತು ಗೃಹೋಪಯೋಗಿ ವಸ್ತುಗಳ ನಷ್ಟಕ್ಕೆ ₹2.42 ಕೋಟಿ ಪರಿಹಾರ ನೀಡಲಾಗಿದೆ.

ಮೂಲಸೌಕರ್ಯ ಹಾನಿ: ರಸ್ತೆ, ಸೇತುವೆ ಸೇರಿದಂತೆ ಮೂಲಭೂತ ಸೌಕರ್ಯಗಳ ಹಾನಿಯ ಸಮೀಕ್ಷೆ ನಡೆಯುತ್ತಿದ್ದು, ವರದಿ ಬಂದ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ಪ್ರತಿ ಕ್ಷೇತ್ರಕ್ಕೆ ವಿಶೇಷ ಅನುದಾನದ ರೂಪದಲ್ಲಿ ₹25 ರಿಂದ ₹50 ಕೋಟಿ ನೀಡಲಾಗಿದೆ ಎಂದು ಸಿಎಂ ವಿವರಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಎಂ.ಬಿ. ಪಾಟೀಲ, ಕೃಷ್ಣ ಬೈರೆಗೌಡ, ಪ್ರಿಯಾಂಕಾ ಖರ್ಗೆ, ಈಶ್ವರ ಖಂಡ್ರೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿಗಳೊಂದಿಗೆ ಇದ್ದರು.

Leave a Reply

Your email address will not be published. Required fields are marked *