
ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ದೇಶಾದ್ಯಂತ ಬಿಜೆಪಿ ಸಂಭ್ರಮದಿಂದ ಆಚರಿಸುತ್ತಿದ್ದರೆ, ಹುಬ್ಬಳ್ಳಿ-ಧಾರವಾಡ ಯೂಥ್ ಕಾಂಗ್ರೆಸ್ ಸಮಿತಿಯು ವಿಶಿಷ್ಟ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದೆ. ಮೋದಿಯವರ ಹುಟ್ಟುಹಬ್ಬವನ್ನು ‘ನಿರುದ್ಯೋಗ ದಿನ’ ಎಂದು ಆಚರಿಸಿದ ಯೂಥ್ ಕಾಂಗ್ರೆಸ್ ಕಾರ್ಯಕರ್ತರು, ಉದ್ಯೋಗ ಸೃಷ್ಟಿ ಕುರಿತು ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಬೇಕೇ ಬೇಕು… ಜಾಬ್ ಬೇಕು’ ಎಂದು ಘೋಷಣೆ
ನಗರದ ಬಿ.ವಿ.ಬಿ. ಕಾಲೇಜು ಆವರಣದಲ್ಲಿ ಜಮಾಯಿಸಿದ ಯೂಥ್ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, “ಬೇಕೇ ಬೇಕು… ಜಾಬ್ ಬೇಕು” ಎಂದು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ, ಆ ಭರವಸೆಗಳು ಈಡೇರಿಲ್ಲ. ಯುವ ಸಮುದಾಯ ಉದ್ಯೋಗವಿಲ್ಲದೆ ಕಂಗಾಲಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಹುಟ್ಟುಹಬ್ಬವನ್ನು ‘ನಿರುದ್ಯೋಗ ದಿನ’ ಎಂದು ಪರಿಗಣಿಸಿ, ಯುವಜನತೆಗೆ ಉದ್ಯೋಗ ಒದಗಿಸುವಂತೆ ಅವರು ಆಗ್ರಹಿಸಿದರು.

