ಅಕ್ರಮ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ: ಇಬ್ಬರ ಬಂಧನ

Spread the love

ಮಂಗಳೂರು: ಕೊಣಾಜೆ ಪೊಲೀಸರು ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಸುಮಾರು ₹1.15 ಲಕ್ಷ ಮೌಲ್ಯದ ಮದ್ಯ ತಯಾರಿಕಾ ಯಂತ್ರಗಳು ಮತ್ತು ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಕೇರಳದ ಕಾಸರಗೋಡು ನಿವಾಸಿ ಪ್ರಣವ್ ವಿ. ಶೆಣೈ (24) ಮತ್ತು ತಾಳಿಪಡ್ಡು ನಿವಾಸಿ ಅನೂಷ್ ಆರ್. (24) ಎಂದು ಗುರುತಿಸಲಾಗಿದೆ. ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾಕಾಳಿ ದೇವಸ್ಥಾನದ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಆರೋಪಿಗಳು ಮದ್ಯ ತಯಾರಿಕಾ ಘಟಕ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳೊಂದಿಗೆ ಇದ್ದ ತೋಮಸ್ ಮತ್ತು ಮಣಿಕುಟ್ಟನ್ ಎಂಬುವವರು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿದ್ದು, ಈ ವೇಳೆ ಮೂರು ಮದ್ಯ ತಯಾರಿಕಾ ಯಂತ್ರಗಳು, ಒಂದು ಮಿಕ್ಸರ್ ಯಂತ್ರ, ಅಕ್ರಮ ಮದ್ಯದ ಬಾಟಲಿಗಳು, ಮತ್ತು ಗೋವಾದಲ್ಲಿ ಮಾತ್ರ ಮಾರಾಟವಾಗುವ ‘ಮನ್ಯನ್ ಹೌಝ್’ ಎಂಬ ಹೆಸರಿನ ಎಂಟು ಮದ್ಯದ ಬಾಟಲಿಗಳು ಹಾಗೂ ಮದ್ಯ ತಯಾರಿಕೆಗೆ ಬಳಸುವ ಇತರ ಉಪಕರಣಗಳು ಪತ್ತೆಯಾಗಿವೆ. ಇವುಗಳ ಒಟ್ಟು ಮೌಲ್ಯ ₹1,15,110 ಎಂದು ಅಂದಾಜಿಸಲಾಗಿದೆ.

ಆರೋಪಿಗಳ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪರಾರಿಯಾದ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *