126 ವರ್ಷಗಳಲ್ಲೇ 5ನೇ ಅತಿ ಶುಷ್ಕ ಜೂನ್: ಜುಲೈನಲ್ಲೂ ಕಡಿಮೆ ಮಳೆಯ ಎಚ್ಚರಿಕೆ

Spread the love

ನವದೆಹಲಿ: ದೇಶದಲ್ಲಿ ಈ ವರ್ಷ ಮುಂಗಾರು ನಿರೀಕ್ಷೆಯಂತೆ ಚುರುಕುಗೊಳ್ಳದೆ, ಜೂನ್ ತಿಂಗಳಲ್ಲಿ ತೀವ್ರ ಮಳೆ ಕೊರತೆ ದಾಖಲಾಗಿದೆ. 126 ವರ್ಷಗಳಲ್ಲೇ 2026ರ ಜೂನ್ ತಿಂಗಳು 5ನೇ ಅತಿ ಶುಷ್ಕ ಜೂನ್ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಜೊತೆಗೆ, ಜುಲೈ ತಿಂಗಳಲ್ಲೂ ದೇಶದ ಬಹುತೇಕ ಭಾಗಗಳಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

ಐಎಂಡಿ ಮುಖ್ಯಸ್ಥ ಡಾ. ಮೃತ್ಯುಂಜಯ ಮಹಾಪಾತ್ರ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಾದ್ಯಂತ ಜೂನ್ ತಿಂಗಳಲ್ಲಿ ವಾಡಿಕೆಯಂತೆ 165.3 ಮಿ.ಮೀ. ಮಳೆಯಾಗಬೇಕಿದ್ದರೆ, ಈ ಬಾರಿ ಕೇವಲ 99.5 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ಇದರೊಂದಿಗೆ ಸುಮಾರು ಶೇ.40ರಷ್ಟು ಮಳೆ ಕೊರತೆ ಉಂಟಾಗಿದ್ದು, 1901ರ ಬಳಿಕದ 126 ವರ್ಷಗಳ ಇತಿಹಾಸದಲ್ಲಿ ಇದು 5ನೇ ಅತಿ ಶುಷ್ಕ ಜೂನ್ ತಿಂಗಳಾಗಿದೆ ಎಂದು ತಿಳಿಸಿದರು.

ಈ ಹಿಂದೆ 2009ರಲ್ಲಿ 87.6 ಮಿ.ಮೀ., 1905ರಲ್ಲಿ 91.9 ಮಿ.ಮೀ., 2014ರಲ್ಲಿ 92.8 ಮಿ.ಮೀ. ಹಾಗೂ 1926ರಲ್ಲಿ 96.7 ಮಿ.ಮೀ. ಮಳೆಯಷ್ಟೇ ದಾಖಲಾಗಿದ್ದು, ಅವುಗಳ ಬಳಿಕ ಈ ವರ್ಷದ ಜೂನ್ ತಿಂಗಳು ಅತ್ಯಂತ ಕಡಿಮೆ ಮಳೆ ಪಡೆದ ವರ್ಷಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಅವರು ವಿವರಿಸಿದರು.

ಜುಲೈ ತಿಂಗಳಲ್ಲಿ ಸಾಮಾನ್ಯವಾಗಿ 280.4 ಮಿ.ಮೀ. ಮಳೆಯಾಗಬೇಕಿದ್ದರೂ, ಈ ಬಾರಿ ಅದರ ಶೇ.94ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಅಂದಾಜಿಸಿದೆ. ದೇಶದ ಬಹುತೇಕ ಪ್ರದೇಶಗಳಲ್ಲಿ ಮಳೆ ಕೊರತೆ ಮುಂದುವರಿಯುವ ಸಾಧ್ಯತೆ ಇದ್ದರೂ, ವಾಯುವ್ಯ, ಈಶಾನ್ಯ ಹಾಗೂ ಪೂರ್ವ-ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಸಾಧಾರಣಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಮುಂಗಾರು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಐಎಂಡಿ ಸಲಹೆ ನೀಡಿದೆ.

Leave a Reply

Your email address will not be published. Required fields are marked *