
ಶಿವಮೊಗ್ಗ: ಯಾದಗಿರಿ ಜಿಲ್ಲೆಯ
ಶಹಾಪುರದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಮಾಸುವ ಮುನ್ನವೇ, ಮತ್ತೊಂದು ಅದೇ ರೀತಿಯ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. 14 ವರ್ಷದ ಬಾಲಕಿಯೊಬ್ಬಳು ತನ್ನ ಮನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವ ಮನಕಲಕುವ ಘಟನೆ ನಡೆದಿದೆ. ಇಂತಹ ಘಟನೆಗಳು ಸಮಾಜದಲ್ಲಿನ ನಂಬಿಕೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ತೀವ್ರ ಹೊಟ್ಟೆ ನೋವಿನ ಕಾರಣ ಶಾಲೆಯಿಂದ ರಜೆ ತೆಗೆದುಕೊಂಡಿದ್ದಳು. ಎರಡು ದಿನಗಳ ನಂತರ ಮನೆಯಲ್ಲೇ ಆಕೆಗೆ ಹೆರಿಗೆಯಾಗಿದೆ. ಕೂಡಲೇ ಕುಟುಂಬಸ್ಥರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮಗುವನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಪ್ರಕಾರ, ಮಗು ಏಳು ತಿಂಗಳಿಗೆ ಜನಿಸಿದ್ದು, ಒಂದೂವರೆ ಕೆ.ಜಿ. ತೂಕವಿದೆ. ಆದರೆ, ಮಗುವಿನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿಗೆ ಅಣ್ಣನೇ ಕಾರಣ?
ಬಾಲಕಿ ಮಗುವಿಗೆ ಜನ್ಮ ನೀಡಿದ ಸುದ್ದಿ ತಿಳಿದ ತಂದೆ-ತಾಯಿ ದಿಗ್ಭ್ರಾಂತರಾಗಿದ್ದಾರೆ. ತನಿಖೆ ವೇಳೆ ಬಾಲಕಿ ನೀಡಿದ ಹೇಳಿಕೆಯು ಮತ್ತಷ್ಟು ಆಘಾತಕಾರಿಯಾಗಿದೆ. ತನ್ನ ಸ್ವಂತ ಅಣ್ಣನಿಂದಲೇ ತಾನು ಗರ್ಭಿಣಿಯಾಗಿರುವುದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಇದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಈ ಕುಟುಂಬದಲ್ಲಿ ಒಬ್ಬ ಪುತ್ರ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಮೊದಲ ಮಗನು ತನ್ನ ಎರಡನೇ ತಂಗಿಯ ಮೇಲೆ ಲೈಂಗಿಕವಾಗಿ ದುರುಪಯೋಗ ಮಾಡಿಕೊಂಡಿರುವುದು ತಿಳಿದುಬಂದಿದೆ.
ಸಮಾಜದ ಸ್ಥಿತಿ ಎತ್ತ ಸಾಗಿದೆ?
ಇದೇ ರೀತಿಯ ಘಟನೆ ಕೆಲವೇ ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ನಡೆದಿತ್ತು. ಅಲ್ಲಿ ವಸತಿ ಶಾಲೆಯಲ್ಲಿ ಓದುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಅಣ್ಣ-ತಂಗಿಯ ಸಂಬಂಧವೇ ಅತ್ಯಂತ ಪವಿತ್ರವೆಂದು ಸಮಾಜ ನಂಬಿರುವಾಗ, ಇಂತಹ ಘಟನೆಗಳು ನಮ್ಮ ಸಮಾಜದ ನೈತಿಕ ಸ್ಥಿತಿಯ ಬಗ್ಗೆ ಚಿಂತೆಗೀಡುಮಾಡುತ್ತವೆ.
ಮನೆಯ ಒಳಗಿನ ವಾತಾವರಣವೂ ಸುರಕ್ಷಿತವಲ್ಲವೇ? ಇನ್ನು ಯಾರನ್ನು ನಂಬಬೇಕು? ಮಕ್ಕಳ ಸುರಕ್ಷತೆಯ ಜವಾಬ್ದಾರಿ ಯಾರ ಮೇಲಿದೆ? ಇಂತಹ ಘಟನೆಗಳನ್ನು ತಡೆಯಲು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಹೇಗೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

