
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬುಧವಾರ ಸುರಿದ ಅಕಾಲಿಕ ಧಾರಾಕಾರ ಮಳೆ ಇಡೀ ರಾಜಧಾನಿಯನ್ನು ಅಸ್ತವ್ಯಸ್ತಗೊಳಿಸಿದ್ದು, ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಿಂದ ಹಿಡಿದು ಜನಪ್ರಿಯ ಪುಸ್ತಕ ಮಳಿಗೆಯವರೆಗೆ ಎಲ್ಲೆಡೆ ಜಲಪ್ರಳಯದಂತಹ ದೃಶ್ಯಗಳು ಕಂಡುಬಂದಿವೆ. ಭಾರಿ ಗಾಳಿ ಮತ್ತು ಆಲಿಕಲ್ಲು ಸಹಿತ ಸುರಿದ ಮಳೆಗೆ ನಗರದ ಜನಜೀವನ ತತ್ತರಿಸಿದ್ದು, ಒಂದೆಡೆ ಸರ್ಕಾರದ ಆಡಳಿತ ಕೇಂದ್ರಕ್ಕೆ ನೀರು ನುಗ್ಗಿದರೆ, ಮತ್ತೊಂದೆಡೆ ಜ್ಞಾನದ ದೇಗುಲವೊಂದು ಮಳೆ ನೀರಿಗೆ ಆಹುತಿಯಾಗಿದೆ.
ರಾಜ್ಯದ ಅತ್ಯುನ್ನತ ಆಡಳಿತ ಕೇಂದ್ರವಾದ ವಿಧಾನಸೌಧವೇ ಮಳೆ ನೀರಿಗೆ ಜಲಾವೃತಗೊಂಡಿರುವುದು ಖಂಡನಿಯ. ಮಳೆಯ ಆರ್ಭಟಕ್ಕೆ ವಿಧಾನಸೌಧದ ಮೂರು ಮಹಡಿಗಳ ಕಾರಿಡಾರ್‌ಗಳಲ್ಲಿ ನೀರು ನಿಂತು ಒಡಾಡಲು, ಅಧಿಕಾರಿಗಳು ಹಾಗೂ ಸಿಬ್ಬಂದಿ ನೀರಿನಲ್ಲೇ ಓಡಾಡುವಂತಾಯಿತು. ವಿಶೇಷವಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕೊಠಡಿಗೆ ಭಾರಿ ಪ್ರಮಾಣದ ನೀರು ನುಗ್ಗಿದ್ದು, ಇಡೀ ಕೊಠಡಿ ಈಜುಕೊಳದಂತೆ ಮಾರ್ಪಟ್ಟಿತ್ತು. ಕಾರಿಡಾರ್‌ಗಳಲ್ಲಿ ಬಿದ್ದ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಇಡೀ ಆವರಣ ಮಳೆ ನೀರಿನಿಂದ ತುಂಬಿ ಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೊಂದೆಡೆ, ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿರುವ ಅತ್ಯಂತ ಜನಪ್ರಿಯ ‘ಬುಕ್‌ವಾರ್ಮ್’ ಪುಸ್ತಕ ಮಳಿಗೆ ಮಳೆ ನೀರಿಗೆ ಆಹುತಿಯಾಗಿರುವುದು ಪುಸ್ತಕ ಪ್ರಿಯರಲ್ಲಿ ತೀವ್ರ ವಿಷಾದ ಮೂಡಿಸಿದೆ. ಏಕಾಏಕಿ ನುಗ್ಗಿದ ಮಳೆ ನೀರಿಗೆ ಸುಮಾರು 14 ಲಕ್ಷ ರೂಪಾಯಿ ಮೌಲ್ಯದ 5,000ಕ್ಕೂ ಹೆಚ್ಚು ಪುಸ್ತಕಗಳು ನಾಶವಾಗಿವೆ. ಕಳೆದ 28 ವರ್ಷಗಳಿಂದ ಕೃಷ್ಣಗೌಡ ಅವರು ಪ್ರೀತಿಯಿಂದ ಕಟ್ಟಿ ಬೆಳೆಸಿದ್ದ ಈ ಮಳಿಗೆಯಲ್ಲಿ ಹಳೆಯ ಮತ್ತು ಅಪರೂಪದ ಪುಸ್ತಕಗಳು ಮಳೆ ನೀರಿನಲ್ಲಿ ತೇಲುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸಿಬ್ಬಂದಿಗಳು ಪುಸ್ತಕಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟರೂ ಸಹ ನೀರಿನ ವೇಗಕ್ಕೆ ಅಸಹಾಯಕರಾಗಬೇಕಾಯಿತು.
ನಗರದಲ್ಲಿ ಸುರಿದ ಈ ಒಂದೇ ಮಳೆಗೆ ಈಗಾಗಲೇ ಏಳು ಮಂದಿ ಬಲಿಯಾಗಿದ್ದು, ಹಲವೆಡೆ ಮರಗಳು ಧರೆಗುರುಳಿ ಕಾರುಗಳು ಜಖಂಗೊಂಡಿವೆ. ಸರ್ಕಾರದ ಆಡಳಿತ ಕೇಂದ್ರಕ್ಕೇ ರಕ್ಷಣೆ ಇಲ್ಲದಂತಾಗಿರುವುದು ಮತ್ತು ಜ್ಞಾನದ ಭಂಡಾರಗಳು ನಾಶವಾಗುತ್ತಿರುವುದು ನಗರದ ಮೂಲಸೌಕರ್ಯಗಳ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ

