ಅಣ್ಣಿಗೇರಿಯಲ್ಲಿ ತಾಲೂಕು ಆಡಳಿತದಿಂದ ಸಡಗರದ ಗಣರಾಜ್ಯೋತ್ಸವ ಆಚರಣೆ

Spread the love

ಅಣ್ಣಿಗೇರಿ: ಪಟ್ಟಣದ ಶಾಸಕರ ಮಾದರಿ ಶಾಲೆಯ ಮೈದಾನದಲ್ಲಿ ಸೋಮವಾರ ಅಣ್ಣಿಗೇರಿ ತಾಲೂಕು ಆಡಳಿತದ ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.

​ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅಣ್ಣಿಗೇರಿ ತಹಶೀಲ್ದಾರ್ ಮಂಜುನಾಥ ದಾಸಪ್ಪನವರ ಅವರು, ಗಣರಾಜ್ಯೋತ್ಸವವು ನಮ್ಮ ಸಂವಿಧಾನದ ಏಕತೆ ಮತ್ತು ಪ್ರಜಾಪ್ರಭುತ್ವದ ಶಕ್ತಿಯನ್ನು ಸ್ಮರಿಸುವ ಮಹತ್ವದ ದಿನವಾಗಿದೆ. ದೇಶದ ಉನ್ನತ ಮೌಲ್ಯಗಳನ್ನು ಕಾಪಾಡುವ ಸಂಕಲ್ಪದೊಂದಿಗೆ ನಾವೆಲ್ಲರೂ ಮುನ್ನಡೆಯೋಣ ಎಂದು ಕರೆ ನೀಡಿದರು.

​ನಂತರ ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ ಮಾತನಾಡಿ, ಅಣ್ಣಿಗೇರಿ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸುವುದು ಇಂದಿನ ಅಗತ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಆಕರ್ಷಕ ಪಥಸಂಚಲನ ಹಾಗೂ ಧ್ವಜ ವಂದನೆ ಸಲ್ಲಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳು ಮತ್ತು ನೃತ್ಯಗಳು ನೆರೆದಿದ್ದ ಸಾರ್ವಜನಿಕರ ಕಣ್ಣು ಮತ್ತು ಮನ ಸೆಳೆದವು. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

​ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಹೆಚ್ಚುವರಿ ಪಿಎಸ್‌ಐ ಯು.ಎಸ್. ಪಾಟೀಲ, ಕಂದಾಯ ಅಧಿಕಾರಿ ರಿಷಿ ಸಾರಂಗಿ, ಪ್ರಮುಖರಾದ ಶಂಕ್ರಣ್ಣ ಕುರಿ, ಮಾರುತಿ ಕಾಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ: ಮಹಾಂತೇಶ ಎಂ. ಹಕ್ಕರಕಿ

Leave a Reply

Your email address will not be published. Required fields are marked *