ಧಾರವಾಡ:ಸಹಕಾರ ಕ್ಷೇತ್ರವು ಕೇವಲ ಆರ್ಥಿಕ ಲಾಭ ಗಳಿಸುವ ಉದ್ದೇಶಕ್ಕೆ ಸೀಮಿತವಾಗಿಲ್ಲ, ಬದಲಿಗೆ ಅದು ಸಾಮಾನ್ಯ ಜನರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಇರುವ ಒಂದು ಅದ್ಭುತ ವೇದಿಕೆಯಾಗಿದೆ ಎಂದು ಸಂಶಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಎ.ಬಿ. ಉಪ್ಪಿನ ಅಭಿಪ್ರಾಯಪಟ್ಟರು.
ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಶ್ರೀ ಮೃತ್ಯುಂಜಯ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಗ್ರಾಹಕರ ನಡುವಿನ ಬಾಂಧವ್ಯದ ಕುರಿತಾದ ಕ್ಲಸ್ಟರ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಕೆಳಹಂತದ ಜನರು, ರೈತರು ಹಾಗೂ ಸಣ್ಣ ಉದ್ಯಮಿಗಳಿಗೆ ಸುಲಭ ಸಾಲ ಸೌಲಭ್ಯ ಒದಗಿಸುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಸಹಕಾರ ಸಂಘಗಳ ಪಾತ್ರ ದೊಡ್ಡದಿದೆ. ಜಾತಿ, ಪಕ್ಷ ಹಾಗೂ ಧರ್ಮದ ಹಂಗಿಲ್ಲದೆ ಸದಸ್ಯರ ಕಲ್ಯಾಣಕ್ಕಾಗಿ ಈ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಾಪುಗೌಡ ಪಾಟೀಲ ಮಾತನಾಡಿ, ಧಾರವಾಡದಲ್ಲಿ ಸಹಕಾರ ಚಳವಳಿಯು ನಿರಂತರ ಹೋರಾಟದ ಹಾದಿಯಲ್ಲಿ ಬೆಳೆದು ಬಂದಿದೆ. ಮುರುಘಾಮಠದ ಶ್ರೀ ಮೃತ್ಯುಂಜಯ ಅಪ್ಪಗಳ ಆಶೀರ್ವಾದ ಹಾಗೂ ಹಿರಿಯರ ಸಹಕಾರದಿಂದ ಈ ಕ್ಷೇತ್ರ ಸಮೃದ್ಧವಾಗಿದೆ. ಪ್ರಸ್ತುತ ದಿನಗಳಲ್ಲಿ ಹಣಕಾಸು ಸಂಸ್ಥೆಗಳನ್ನು ನಡೆಸುವುದು ಸವಾಲಿನ ಕೆಲಸವಾಗಿದ್ದು, ಗ್ರಾಹಕರ ಹಿತ ಕಾಯುವ ಮೂಲಕ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಕೆ.ಸಿ.ಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಶಿವಾನಂದ ಹೂಗಾರ ಮಾತನಾಡಿ, ೧೯೦೫ರಲ್ಲಿ ಜಿಲ್ಲೆಯ ಕಣಗಿನಹಾಳದಲ್ಲಿ ಆರಂಭವಾದ ದೇಶದ ಮೊದಲ ಕೃಷಿ ಸಹಕಾರ ಸಂಘವು ಇಡೀ ಚಳವಳಿಗೆ ಭದ್ರ ಬುನಾದಿ ಹಾಕಿದೆ. ಪ್ರಸ್ತುತ ಶ್ರೀ ಮೃತ್ಯುಂಜಯ ಸೊಸೈಟಿಯು ಬ್ಯಾಂಕಿಂಗ್ ಮತ್ತು ಗ್ರಾಹಕ ಸೇವೆಯಲ್ಲಿ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮೃತ್ಯುಂಜಯ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಳಕಪ್ಪ ಎಚ್. ಗುರಿಕಾರ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಸಂಸ್ಥೆಯು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ಎಲ್ಲರ ಸಹಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದ್ದು, ಬಡವರ ಕಲ್ಯಾಣಕ್ಕಾಗಿ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ ವಿ.ಜಿ. ಕುಲಕರ್ಣಿ ಹಾಗೂ ಮಂಗಳಗೌಡ ದಾನಪ್ಪಗೌಡರ ಅವರು ಸಹಕಾರ ಚಳವಳಿ ಮತ್ತು ಸಿಬ್ಬಂದಿಗಳ ಕರ್ತವ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯ ಮೇಲೆ ಸಂಸ್ಥೆಯ ಉಪಾಧ್ಯಕ್ಷೆ ಮಹಾದೇವಿ ಕಬ್ಬೂರ, ನಿರ್ದೇಶಕರುಗಳಾದ ಬಸವರಾಜ ಕಪಲಿ, ಈಶ್ವರಗೌಡ ಪಾಟೀಲ, ಅರವಿಂದ ಕಪಲಿ, ಲಕ್ಷ್ಮಣ ಕಬ್ಬೂರ, ಜಗದೀಶ ಹೋಳೆಯಣ್ಣವರ, ಮಾರ್ಕಂಡೇಯ ದೊಡ್ಡಮನಿ, ಬಸವಣ್ಣೆಪ್ಪ ಶಿವಳ್ಳಿ ಸೇರಿದಂತೆ ಪಾರ್ವತಿ ಹಾಲಭಾವಿ, ಜ್ಯೋತಿ ಭಾವಿಕಟ್ಟಿ, ರಾಜಕುಮಾರ ಕೊಟ್ಟೂರಶೆಟ್ಟರ, ಗದಿಗೆಪ್ಪ ಜಕ್ಕಣ್ಣವರ, ಕಾನೂನು ಸಲಹೆಗಾರ ಶಿವಾನಂದ ಭಾವಿಕಟ್ಟಿ ಹಾಗೂ ಪ್ರಧಾನ ವ್ಯವಸ್ಥಾಪಕ ಕಿರಣ್ ಎ. ಸೇರಿದಂತೆ ಇತರರಿದ್ದರು


