​ತಾನು ‘ಶಿವ’ನೆಂದು ನಂಬಿಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: ಸ್ವಘೋಷಿತ ದೇವಮಾನವನ ಬಂಧನ

Spread the love

ಪಾಲ್ಸರ್ (ಮಹಾರಾಷ್ಟ್ರ):

ತಾನು ಸಾಕ್ಷಾತ್ ಶಿವನ ಅವತಾರ ಎಂದು ನಂಬಿಸಿ, ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾರಾಷ್ಟ್ರದ ಸ್ವಘೋಷಿತ ದೇವಮಾನವ ಹಾಗೂ ಜ್ಯೋತಿಷಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಾಲ್ಸರ್ ಮೂಲದ ಋಷಿಕೇಶ್ ವೈದ್ಯ ಎಂದು ಗುರುತಿಸಲಾಗಿದೆ.

 

ಫೇಸ್‌ಬುಕ್ ಪರಿಚಯ ದೌರ್ಜನ್ಯಕ್ಕೆ ಹಾದಿ

​ಪುಣೆ ನಿವಾಸಿಯಾಗಿರುವ 35 ವರ್ಷದ ಸಂತ್ರಸ್ತ ಮಹಿಳೆಗೆ 2023ರಲ್ಲಿ ಫೇಸ್‌ಬುಕ್ ಮೂಲಕ ಋಷಿಕೇಶ್ ಪರಿಚಯವಾಗಿದ್ದನು. ಈ ಪರಿಚಯ ಸ್ನೇಹಕ್ಕೆ ತಿರುಗಿ, 2023ರ ಡಿಸೆಂಬರ್‌ನಲ್ಲಿ ಆರೋಪಿಯು ಪುಣೆಯಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ಭೇಟಿಯಾಗಿದ್ದನು. ಜ್ಯೋತಿಷ್ಯದ ಮಾತುಗಳಿಂದ ಮಹಿಳೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದ ಈತ, ತಾನು ಶಿವನ ಅವತಾರ ಎಂದು ನಂಬಿಸಿದ್ದನು.

‘ನೀನೇ ನನ್ನ ಪಾರ್ವತಿ’ ಎಂದಿದ್ದ ಕಾಮುಕ

​”ನೀನು ಪೂರ್ವ ಜನ್ಮದಲ್ಲಿ ನನ್ನ ಪತ್ನಿಯಾಗಿದ್ದೆ, ಈ ಜನ್ಮದಲ್ಲೂ ನೀನೇ ನನ್ನ ಪಾರ್ವತಿ” ಎಂದು ಮಹಿಳೆಯನ್ನು ನಂಬಿಸಿದ ಆರೋಪಿ, ಪೂಜೆ ಮತ್ತು ಆಧ್ಯಾತ್ಮದ ಹೆಸರಿನಲ್ಲಿ ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ನಗ್ನ ದೃಶ್ಯ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್

​ದೌರ್ಜನ್ಯದ ವೇಳೆ ಮಹಿಳೆಗೆ ತಿಳಿಯದಂತೆ ಆರೋಪಿ ತನ್ನ ಮೊಬೈಲ್ ಫೋನ್‌ನಲ್ಲಿ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದನು. ಬಳಿಕ ಈ ವಿಡಿಯೋಗಳನ್ನು ಇಟ್ಟುಕೊಂಡು ಆಕೆಗೆ ಬೆದರಿಕೆ ಹಾಕಲು ಶುರು ಮಾಡಿದ್ದನು. ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

​ಆರೋಪಿಯ ಬ್ಲ್ಯಾಕ್‌ಮೇಲ್ ತಂತ್ರದಿಂದ ಬೇಸತ್ತ ಮಹಿಳೆ ಅಂತಿಮವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಕಾಮುಕ ಜ್ಯೋತಿಷಿಯನ್ನು ಜೈಲಿಗಟ್ಟಿದ್ದಾರೆ.

Leave a Reply

Your email address will not be published. Required fields are marked *