ದಂಟಳ್ಳಿ ಏತ ನೀರಾವರಿ ಯೋಜನೆ: 153 ದಿನಗಳ ರೈತರ ಅಹೋರಾತ್ರಿ ಧರಣಿ ಅಂತ್ಯ

Spread the love

ಹನೂರು: ತಾಲ್ಲೂಕಿನ ವಡಕೆಹಳ್ಳ ಗ್ರಾಮದಲ್ಲಿ ದಂಟಳ್ಳಿ ಏತ ನೀರಾವರಿ ಯೋಜನೆ ಜಾರಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಯ ವತಿಯಿಂದ ಕಳೆದ 153 ದಿನಗಳಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹವು ಶನಿವಾರ ಅಧಿಕೃತವಾಗಿ ಮುಕ್ತಾಯಗೊಂಡಿತು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ.ಆರ್. ಮಂಜುನಾಥ್ ಅವರು ಪ್ರತಿಭಟನಾ ನಿರತ ರೈತರ ಮನವೊಲಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಅಂತ್ಯ ಹಾಡಲಾಯಿತು.

​ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್, ಹನೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ರಸ್ತೆ, ಸೇತುವೆ ಹಾಗೂ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ತರಲಾಗುತ್ತಿದೆ. ಈಗಾಗಲೇ ರಾಮನಗುಡ್ಡ ಕೆರೆ ಭರ್ತಿಯಾಗಿದ್ದು, ಅಂತರ್ಜಲ ಮಟ್ಟ ವೃದ್ಧಿಸುತ್ತಿದೆ. ಮುಖ್ಯವಾಗಿ ಸುಮಾರು 490 ಕೋಟಿ ರೂಪಾಯಿ ವೆಚ್ಚದಲ್ಲಿ ಕಾವೇರಿ ನದಿ ಮೂಲದಿಂದ ಉಡುತೊರೆ ಹಳ್ಳ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಈ ಯೋಜನೆ ಜಾರಿಯಾದರೆ ಮಾರ್ಟಳ್ಳಿ, ರಾಮಾಪುರ, ಕೌದಳ್ಳಿ, ಶೆಟ್ಟಳ್ಳಿ ಹಾಗೂ ಕುರಟ್ಟಿ ಹೊಸೂರು ಭಾಗದ ರೈತರಿಗೆ ವರದಾನವಾಗಲಿದೆ ಎಂದು ವಿವರಿಸಿದರು.

​ಮುಂದುವರಿದು ಮಾತನಾಡಿದ ಅವರು, ಮಾರ್ಟಳ್ಳಿ ಭಾಗದ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಈಗಾಗಲೇ ಸಮಗ್ರ ಯೋಜನೆ ಸಿದ್ಧಪಡಿಸಲಾಗಿದೆ. ರೈತರ ಹಿತರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಹಂತ ಹಂತವಾಗಿ ಈ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಿಯೇ ತೀರುತ್ತೇನೆ ಎಂದು ಭರವಸೆ ನೀಡಿದರು. ಶಾಸಕರ ಸ್ಪಷ್ಟ ಭರವಸೆಯ ಮೇರೆಗೆ ರೈತ ಮುಖಂಡರು ಧರಣಿಯನ್ನು ಹಿಂಪಡೆದರು.

​ಕಾರ್ಯಕ್ರಮದಲ್ಲಿ ವಡಕೆಹಳ್ಳದ ಫಾದರ್ ಡಾ. ಸಿಲುವೈನಾಥ್, ಬಿದರಳ್ಳಿಯ ಫಾದರ್, ಸಿಸ್ಟರ್ ಸೇಲ್ವಮೇರಿ, ಸೈಲೆಂದ್ರ, ಸಯ್ಯದ್ ಉಲ್ಲಾ, ಬಸವರಾಜು, ಬೆಟ್ಟಣ್ಣ, ಮಾರ್ಟಳ್ಳಿ ಘಟಕದ ಅಧ್ಯಕ್ಷ ಅರ್ಪುದ ರಾಜು, ರಾಜಶೇಖರ್ ಸೇರಿದಂತೆ ಹಲವಾರು ರೈತ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ: ಕಾರ್ತಿಕ್ ಗೌಡ ಹನೂರ

Leave a Reply

Your email address will not be published. Required fields are marked *