ಅಸ್ತೂರು ಗ್ರಾಮದ ನೂತನ ದೇವಾಲಯಕ್ಕೆ ಮಾಜಿ ಶಾಸಕ ಆರ್. ನರೇಂದ್ರ ಭೇಟಿ: ಭಕ್ತಿಪೂರ್ವಕ ಉದ್ಘಾಟನೆ

Spread the love

ಹನೂರು: ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಿಸಿ ಭಕ್ತರಿಗೆ ಸಮರ್ಪಣೆ ಮಾಡುವುದರಿಂದ ಆಯಾ ಭಾಗದಲ್ಲಿ ಉತ್ತಮ ಸಂಸ್ಕಾರ ಹಾಗೂ ಆರೋಗ್ಯವಂತ ವಾತಾವರಣ ನಿರ್ಮಾಣವಾಗಲಿದೆ ಎಂದು ಮಾಜಿ ಶಾಸಕ ಆರ್. ನರೇಂದ್ರ ಅವರು ಅಭಿಪ್ರಾಯಪಟ್ಟರು.

ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಸ್ತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಶನಿಶ್ವರ ಸ್ವಾಮಿ, ಜೆಡೆಶ್ವರ ಸ್ವಾಮಿ ಹಾಗೂ ಪಡಗಲ ಮಾದೇಶ್ವರ ಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು. ಕಾಡಂಚಿನ ಪುಟ್ಟ ಗ್ರಾಮದಲ್ಲಿ ಇಷ್ಟೊಂದು ಸುಂದರವಾದ ದೇವಾಲಯವನ್ನು ಭಕ್ತಾದಿಗಳು ಒಗ್ಗೂಡಿ ನಿರ್ಮಿಸಿರುವುದು ಸಂತಸದ ವಿಚಾರ. ಇಂತಹ ಧಾರ್ಮಿಕ ಸ್ಥಳಗಳನ್ನು ಕೇವಲ ಪೂಜೆಗಷ್ಟೇ ಸೀಮಿತಗೊಳಿಸದೆ, ಗ್ರಾಮದ ಶುಭ ಕಾರ್ಯಗಳಿಗೂ ಬಳಸಿಕೊಳ್ಳುವ ಮೂಲಕ ಭಕ್ತಾದಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೊನ್ನಾಚಿ ಮಹಾದೇವಸ್ವಾಮಿ ಮಾತನಾಡಿ, ಗ್ರಾಮದಲ್ಲಿ ದೇವಾಲಯ ನಿರ್ಮಾಣವಾಗಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ. ಸರ್ವ ಜನಾಂಗದವರು ದೇವರ ಕೃಪೆಗೆ ಪಾತ್ರರಾಗಿ ಸೌಹಾರ್ದತೆಯಿಂದ ಬದುಕುವಂತಾಗಲಿ ಎಂದು ಹಾರೈಸಿದರು. ಬಳಿಕ ಮಾತನಾಡಿದ ಉದ್ಯಮಿ ಪೊನ್ನಾಚಿ ರಂಗಸ್ವಾಮಿ, ಪೂರ್ವಜರು ಹಾಕಿಕೊಟ್ಟ ಆಚಾರ-ವಿಚಾರಗಳನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಧಾರ್ಮಿಕ ಕಾರ್ಯಗಳಿಂದ ಗ್ರಾಮದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ನೆಲೆಸುತ್ತದೆ ಎಂದರು.

ದೇವಾಲಯದ ಜೀರ್ಣೋದ್ಧಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಅಸ್ತೂರು ಗ್ರಾಮದ ಶಿವಕುಮಾರ್ ಸ್ವಾಮೀಜಿಗಳು ಹಾಗೂ ಪುರೋಹಿತರಾದ ಶಿವಕುಮಾರ್ ಸ್ವಾಮೀಜಿಗಳು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಈ ಧಾರ್ಮಿಕ ವಿಧಿವಿಧಾನಗಳು ಭಕ್ತಿ ಸಂಭ್ರಮಕ್ಕೆ ಸಾಕ್ಷಿಯಾದವು.

ಈ ಸಂದರ್ಭದಲ್ಲಿ ಕರಿಕಲ್ಲು ಮಾಲೀಕರಾದ ಮ. ಬೆಟ್ಟದ ಪುಟ್ಟಸ್ವಾಮಿ, ವಿಗ್ರಹಗಳ ದಾನಿಗಳಾದ ಕಾಂಗ್ರೆಸ್ ಮುಖಂಡ ದಾಸಪ್ಪ, ಊರು ಗೌಡರುಗಳಾದ ರಂಗಮಾದಪ್ಪ, ಚಿಕ್ಕರಂಗೇಗೌಡ, ಮುನಿಬಸವೇಗೌಡ, ಪ್ರಮುಖರಾದ ಕೋಟೆಬಸಪ್ಪ, ಎ.ಸಿ. ವೀರಪ್ಪ, ಕಾಳಪ್ಪ, ಮುನಿಮಾರ ಉಪಸ್ಥಿತರಿದ್ದರು. ಅಲ್ಲದೆ ಪತ್ರಕರ್ತರ ಸಂಘದ ಅಧ್ಯಕ್ಷ ಬಂಗಾರಪ್ಪ ಸಿ., ರವಿಕುಮಾರ್, ಮಾದಚಾರಿ, ಬಂಗಿದಾಸೆಗೌಡ, ಬಿಜೆಪಿ ಮುಖಂಡ ಮಹಾಲಿಂಗಸ್ವಾಮಿ, ಹನೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ರಮೇಶ್, ಮುನಿರಾಜು, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಭದ್ರೆಗೌಡ, ಪುಟ್ಟಮಾದೇಗೌಡರು, ಬಿ.ಎಸ್. ಮುತ್ತು, ರಾಮದಪ್ಪ ಸೇರಿದಂತೆ ಅನೇಕರಿದ್ದರು

Leave a Reply

Your email address will not be published. Required fields are marked *