​ಯಲ್ಲಾಪುರ: ರಂಜಿತಾ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಹಾಗೂ 2 ಎಕರೆ ಜಮೀನು ನೀಡಿ – ಬಿ.ವೈ. ವಿಜಯೇಂದ್ರ ಆಗ್ರಹ

Spread the love

ಯಲ್ಲಾಪುರ: ಮುಸ್ಲಿಂ ಯುವಕನ ಚಾಕು ಇರಿತಕ್ಕೆ ಬಲಿಯಾದ ದಲಿತ ಹಿಂದೂ ಯುವತಿ ರಂಜಿತಾ ಬನಸವಾಡೆ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ತಕ್ಷಣವೇ 50 ಲಕ್ಷ ರೂಪಾಯಿ ಪರಿಹಾರ ಹಾಗೂ 2 ಎಕರೆ ಜಮೀನು ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ. ಭಾನುವಾರ ಯಲ್ಲಾಪುರಕ್ಕೆ ಭೇಟಿ ನೀಡಿದ ಅವರು, ಮೃತ ಯುವತಿಯ ಅಂತಿಮ ದರ್ಶನ ಪಡೆದು, ಅವರ ತಾಯಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವತಿಯ ಸಾವಿನಿಂದ ಹತ್ತು ವರ್ಷದ ಬಾಲಕ ಅನಾಥನಾಗಿದ್ದು, ವೃದ್ಧ ತಾಯಿ ಅಸಹಾಯಕರಾಗಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ಆ ಕುಟುಂಬದ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

​ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಿಡಿಕಾರಿದ ವಿಜಯೇಂದ್ರ ಅವರು, ಸರ್ಕಾರ ಮತ್ತು ಗೃಹ ಇಲಾಖೆಯ ನಿಷ್ಕ್ರಿಯತೆಯೇ ಇಂತಹ ಬರ್ಬರ ಹತ್ಯೆಗಳು ಮರುಕಳಿಸಲು ಕಾರಣ ಎಂದು ಟೀಕಿಸಿದರು. ಇಂತಹ ಘಟನೆಗಳು ನಡೆದಾಗ ಪೊಲೀಸ್ ತನಿಖೆ ಪೂರ್ಣಗೊಳ್ಳುವ ಮುನ್ನವೇ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಇದು ವೈಯಕ್ತಿಕ ಕಾರಣ ಅಥವಾ ‘ಲವ್ ಜಿಹಾದ್’ ಅಲ್ಲ ಎಂದು ಕ್ಲೀನ್ ಚಿಟ್ ನೀಡುತ್ತಿರುವುದು ದುರದೃಷ್ಟಕರ. ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳು ಅಪರಾಧಿಗಳಿಗೆ ಪ್ರಚೋದನೆ ನೀಡುತ್ತಿವೆ. ಈ ಪ್ರಕರಣದ ಬಗ್ಗೆ ಗಂಭೀರ ಹಾಗೂ ಸಮರ್ಪಕ ತನಿಖೆ ನಡೆಸಿ ಹತ್ಯೆಗೊಳಗಾದ ದಲಿತ ಕುಟುಂಬಕ್ಕೆ ಮತ್ತು ಹಿಂದೂ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

​ಇದೇ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ವಿಜಯೇಂದ್ರ ಅವರು ಹಸ್ತಾಂತರಿಸಿದರು. ಅಲ್ಲದೆ, ಮೃತ ರಂಜಿತಾ ಅವರ 10 ವರ್ಷದ ಮಗನ ಮುಂದಿನ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಹರಿಪ್ರಕಾಶ್ ಕೋಣೆಮನೆ ಅವರು ವಹಿಸಿಕೊಂಡಿರುವುದಾಗಿ ಪ್ರಕಟಿಸಿ, ಅವರ ಈ ಕಾರ್ಯವನ್ನು ಶ್ಲಾಘಿಸಿದರು. ನೇಹಾ ಹಿರೇಮಠ್ ಪ್ರಕರಣದ ಮಾದರಿಯಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಖಂಡನೀಯ ಎಂದ ಅವರು, ನಾವು ಸಂತ್ರಸ್ತರ ಪರವಾಗಿ ಮಾತನಾಡಿದರೆ ಕೋಮುವಾದಿಗಳು ಎಂದು ಹಣೆಪಟ್ಟಿ ಕಟ್ಟುವ ಕೆಲಸ ನಡೆಯುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

​ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ, ಹರಿಪ್ರಕಾಶ್ ಕೋಣೆಮನೆ, ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಯಲ್ಲಾಪುರ ಮಂಡಲ ಅಧ್ಯಕ್ಷ ಪ್ರಸಾದ್ ಹೆಗಡೆ ಸೇರಿದಂತೆ ಬಿಜೆಪಿ ಹಾಗೂ ವಿಶ್ವಹಿಂದೂ ಪರಿಷತ್ತಿನ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *