
ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರ ತಿರುವಿನಲ್ಲಿ ಇಥೆನಾಲ್ ತುಂಬಿದ್ದ ಟ್ಯಾಂಕರ್ ಲಾರಿಯೊಂದು ಪಲ್ಟಿಯಾಗಿ ಭೀಕರ ಬೆಂಕಿ ಅನಾಹುತ ಸಂಭವಿಸಿದ ಘಟನೆ ಜ.31ರ ಶನಿವಾರ ಸಂಜೆ ನಡೆದಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಲಾರಿ ಧಗಧಗನೆ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಕಲಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ನಿವಾಸಿ ಶಿವಾನಂದ ಬೀರಾದಾರ್ ಎಂಬುವವರು ಇಥೆನಾಲ್ ತುಂಬಿದ ಟ್ಯಾಂಕರ್ ಅನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಅರಬೈಲ್ ಘಟ್ಟದ ಕಡಿದಾದ ತಿರುವಿನಲ್ಲಿ ಲಾರಿ ಅತಿ ವೇಗವಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿದೆ. ಈ ವೇಳೆ ಟ್ಯಾಂಕರ್ನಿಂದ ಇಥೆನಾಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಅನಾಹುತದ ತೀವ್ರತೆ ಹೆಚ್ಚಾಯಿತು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅರಬೈಲ್ ಘಟ್ಟದ ತಿರುವಿನಲ್ಲಿ ಈ ಘಟನೆ ನಡೆದಿದ್ದರಿಂದ ಕೆಲಕಾಲ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

