ಇ-ಸ್ವತ್ತು ನೀಡಲು ಲಂಚದ ಬೇಡಿಕೆ ಆರೋಪ: ಪಿಡಿಒ ವಿರುದ್ಧ ಪ್ರತಿಭಟನೆ

Spread the love

ಹೊಳೆಹೊನ್ನೂರು: ಭೂ ಪರಿವರ್ತನೆಗೊಂಡ ಜಮೀನಿಗೆ ಇ-ಸ್ವತ್ತು ನೀಡಲು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ, ಯಡೇಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಅರ್ಚನಾ ಅವರ ವಿರುದ್ಧ ಗ್ರಾಮಸ್ಥರು ಬುಧವಾರ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರ ಆರೋಪಗಳು:
ಎಂ.ಎಚ್. ಕಮಲಮ್ಮ ಎಂಬುವರಿಗೆ ಸೇರಿದ ಸರ್ವೇ ನಂ. 60/6 ರಲ್ಲಿನ 34 ಗುಂಟೆ ಜಮೀನು ಜಿಲ್ಲಾಧಿಕಾರಿಗಳ ಕಚೇರಿಯಿಂದ ನಿಯಮಾನುಸಾರ ಭೂ ಪರಿವರ್ತನೆಯಾಗಿದೆ. ಇ-ಸ್ವತ್ತುಗಾಗಿ 22-05-2023 ರಂದು ಯಡೇಹಳ್ಳಿ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಲಾಗಿದೆ. ಜಮೀನಿನ ಅಗತ್ಯ ಶುಲ್ಕ ₹1.48 ಲಕ್ಷ ಮತ್ತು ಮ್ಯುಟೇಷನ್ ಶುಲ್ಕ ₹1,000 ಅನ್ನು ಸಹ ಪಾವತಿಸಲಾಗಿದೆ. ಆದರೂ ಸಹ, ಈವರೆಗೆ ಇ-ಸ್ವತ್ತು ನೀಡದೆ ಪಿಡಿಒ ಅರ್ಚನಾ ಅವರು ಸತತವಾಗಿ ಅಲೆದಾಡಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಪಿಡಿಒ ಸ್ಪಷ್ಟೀಕರಣ:
ಈ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಪಿಡಿಒ ಅರ್ಚನಾ, ಕಳೆದ ನಾಲ್ಕು ವರ್ಷಗಳಿಂದ ತಾನು ಈ ಪಂಚಾಯಿತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೂ ಯಾವುದೇ ಆರೋಪಗಳು ತಮ್ಮ ಮೇಲಿಲ್ಲ. ಈ ಪ್ರಕರಣದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ವಿಳಂಬವಾಗಿದೆಯೇ ಹೊರತು, ಯಾವುದೇ ಲಂಚದ ಬೇಡಿಕೆ ಇಟ್ಟಿಲ್ಲ. ಇದು ಶುದ್ಧ ಸುಳ್ಳು ಆರೋಪ ಎಂದು ಸ್ಪಷ್ಟಪಡಿಸಿದರು. ಆದರೂ, ಇನ್ನು 15 ದಿನಗಳಲ್ಲಿ ಇ-ಸ್ವತ್ತು ನೀಡುವ ಭರವಸೆಯನ್ನು ಅವರು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎಂ. ಬಸವರಾಜ್, ಮಂಜುನಾಥ, ಜ್ಞಾನೇಶ್, ನವೀನ್, ರಂಗನಾಥ್, ಜಬೀವುಲ್ಲಾ, ನಾಗರಾಜಪ್ಪ, ನಂದೀಶ, ಸಂಗಯ್ಯ ಮತ್ತು ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *