
ಯಾದಗಿರಿ: ‘ಆರೆಸ್ಸೆಸ್ ಗೀತೆ ಹಾಡಿದರೆ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದರೆ, ನಾನು ಮತ್ತು ಶಾಸಕ ಚೆನ್ನಾರೆಡ್ಡಿ ಪಾಟೀಲ್ ಇಬ್ಬರೂ ಹಾಡುತ್ತೇವೆ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ವಿರೋಧಿಗಳಿಗೆ ವ್ಯಂಗ್ಯವಾಡಿದ್ದಾರೆ.
ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಸ್ಕೃತ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದು, ಸಂದರ್ಭಕ್ಕೆ ಅನುಗುಣವಾಗಿ ಅಧಿವೇಶನದಲ್ಲಿ ಹಾಡಿದ್ದಾರೆ ಅಷ್ಟೇ. ಇದರ ಹಿಂದಿನ ಉದ್ದೇಶ ಬೇರೆಯೇ ಇದೆ ಎಂದು ವಿರೋಧ ಪಕ್ಷದವರು ಮಾತನಾಡುತ್ತಿರುವುದು ಸರಿಯಲ್ಲ ಎಂದರು.
ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಅವರನ್ನು ಟೀಕಿಸಿದ ಮಹೇಶ್ ತಿಮರೋಡಿ ಕುರಿತು, ‘ಆತನನ್ನು ಒದ್ದು ಒಳಗೆ ಹಾಕಿದ್ದೇವೆ’ ಎಂದು ಹೇಳಿರುವ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಜಾರಕಿಹೋಳಿ, ಈ ಮಾತು ದೂರು ಬಂದ ಹಿನ್ನೆಲೆಯಲ್ಲಿ ಹೇಳಿದ್ದಾಗಿದೆ. ಈ ಎರಡೂ ವಿಷಯಗಳನ್ನು ಬೇರೆ ರೀತಿಯಲ್ಲಿ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಬೆಳೆ ಹಾನಿ ಪರಿಹಾರಕ್ಕೆ ವರದಿ ಬಂದ ನಂತರ ಕ್ರಮ’
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆಗಳ ಬಗ್ಗೆ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ ಬಳಿಕವೇ ಪರಿಹಾರ ವಿತರಣೆ ಮಾಡಲಾಗುತ್ತದೆ. ಅಲ್ಲದೆ, ಹೊಸ ಸೇತುವೆಗಳ ನಿರ್ಮಾಣ ಮತ್ತು ಶಿಥಿಲಗೊಂಡಿರುವ ಸೇತುವೆಗಳ ದುರಸ್ತಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ನಕಲಿ ಜಾತಿ ಪ್ರಮಾಣಪತ್ರ ವಿತರಣೆಯನ್ನು ತಡೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಹೇಳಿದರು.
ಮಾಜಿ ಸಚಿವ ರಾಜಣ್ಣ ಅವರು ದಿಲ್ಲಿಗೆ ಹೋಗಿ ನಾಯಕರನ್ನು ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ, ‘ಇದು ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದು ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಜರಿದ್ದರು.

