
ಚಿಕ್ಕಮಗಳೂರು: ಪ್ರೀತಿಯನ್ನು ನಿರಾಕರಿಸಿದ ದ್ವೇಷಕ್ಕೆ ಪಾಪಿ ಪ್ರೇಮಿಯೊಬ್ಬ ಯುವತಿಗೆ ನಡುರಸ್ತೆಯಲ್ಲಿ ಕಲ್ಲಿನಿಂದ ಹಲ್ಲೆ ನಡೆಸಿ, ನಂತರ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ನಡೆದಿದೆ.
ಕಳಸದ ಖಾಸಗಿ ಕ್ಲಿನಿಕ್‌ನಲ್ಲಿ ದಾದಿಯಾಗಿ (ನರ್ಸ್) ಕೆಲಸ ಮಾಡುತ್ತಿದ್ದ ಕಾವ್ಯ (೨೪) ಚಾಕು ಇರಿತಕ್ಕೊಳಗಾದ ಯುವತಿ. ಈ ಕೃತ್ಯ ಎಸಗಿದ ಯುವಕ ಕೊಪ್ಪ ತಾಲ್ಲೂಕಿನ ಗುಡ್ಡತೋಟ ಮೂಲದವನು ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಶುಕ್ರವಾರ ಕಳಸ ಪಟ್ಟಣದ ಮಹಾವೀರ ಸರ್ಕಲ್ ಬಳಿ ಯುವತಿ ಕಾವ್ಯ ತೆರಳುತ್ತಿದ್ದಾಗ, ಹಿಂದಿನಿಂದ ಬಂದ ಯುವಕ ಆಕೆಯನ್ನು ತಡೆದು ಜಗಳ ತೆಗೆದಿದ್ದಾನೆ. ತಾನು ಪ್ರೀತಿಸುತ್ತಿರುವ ವಿಷಯವನ್ನು ಒಪ್ಪಿಕೊಳ್ಳುವಂತೆ ಆತ ಕಾವ್ಯಗೆ ಒತ್ತಾಯಿಸಿದ್ದಾನೆ. ಆದರೆ, ಕಾವ್ಯ ಪ್ರೀತಿ ನಿರಾಕರಿಸಿದಾಗ ಆಕ್ರೋಶಗೊಂಡ ಯುವಕ, ರಸ್ತೆಯಲ್ಲಿದ್ದ ಕಲ್ಲಿನಿಂದ ಆಕೆಯ ತಲೆಗೆ ಹಲ್ಲೆ ಮಾಡಿದ್ದಾನೆ. ಆಕೆಯ ತಲೆ ಮತ್ತು ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ಕಾವ್ಯ ಅವರನ್ನು ಸ್ಥಳೀಯರು ತಕ್ಷಣವೇ ಕಳಸದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಕಳಸ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

