ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆಗೆ ಯತ್ನಿಸಿದ ಪತ್ನಿ ಬಂಧನ

Spread the love

ವಿಜಯಪುರ: ಗಂಡ ಮತ್ತು ಇಬ್ಬರು ಮಕ್ಕಳಿದ್ದರೂ, ಪ್ರಿಯಕರನೊಂದಿಗೆ ಅಕ್ರಮ ಸಂಬಂಧ ಮುಂದುವರಿಸಿಕೊಂಡು ಗಂಡನನ್ನೇ ಕೊಲ್ಲಲು ಪತ್ನಿ ಯತ್ನಿಸಿದ ಆಘಾತಕಾರಿ ಘಟನೆ ಇಂಡಿ ಪಟ್ಟಣದ ಅಕ್ಕಮಹಾದೇವಿ ನಗರದಲ್ಲಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಗಂಡ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.

ಸೆಪ್ಟೆಂಬರ್ 1ರಂದು ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬಹಿರಂಗವಾಗಿದೆ. ಬೀರಪ್ಪ ಮಾಯಪ್ಪ ಪೂಜಾರಿ (36) ಎಂಬವರು ಪತ್ನಿ ಸುನಂದಾ ಮತ್ತು ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸುನಂದಾ, ಸಿದ್ದಪ್ಪ ಕ್ಯಾತಕೇರಿ ಎಂಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ. ಈ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೊಲ್ಲಲು ಸುನಂದಾ ಪ್ರಿಯಕರನೊಂದಿಗೆ ಯೋಜನೆ ರೂಪಿಸಿದ್ದಾಳೆ ಎನ್ನಲಾಗಿದೆ.

ರಾತ್ರಿ ಮಲಗಿದ್ದ ಬೀರಪ್ಪನ ಎದೆಯ ಮೇಲೆ ಕುಳಿತು, ಕತ್ತು ಹಾಗೂ ಮರ್ಮಾಂಗ ಹಿಸುಕಿದ ಸುನಂದಾ, “ಸಿದ್ದು ಬಿಡಬೇಡ, ಖಲಾಸ್ ಮಾಡು” ಎಂದು ಪ್ರಿಯಕರನಿಗೆ ಕೂಗಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಎಚ್ಚರಗೊಂಡ ಬೀರಪ್ಪ, ಕಾಲಿನಿಂದ ಕೂಲರ್ ಒದ್ದಿದ ಪರಿಣಾಮ ಶಬ್ದವಾಗಿದ್ದು, ಮನೆಯ ಮಾಲೀಕರು ಎಚ್ಚರಗೊಂಡಿದ್ದಾರೆ. ಇದರಿಂದ ಭಯಗೊಂಡ ಸಿದ್ದಪ್ಪ ಹಾಗೂ ಸಹಾಯಕರು ಪರಾರಿಯಾಗಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದರೆ, ಘಟನೆಯ ಸಂದರ್ಭದಲ್ಲಿ ಸಿದ್ದಪ್ಪನೇ ವಿಡಿಯೋ ರೆಕಾರ್ಡ್ ಮಾಡಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಆ ವಿಡಿಯೋದಲ್ಲಿನ ಧ್ವನಿಮುದ್ರಣೆ ಘಟನೆ ಬಹಿರಂಗಪಡಿಸುವಲ್ಲಿ ಪ್ರಮುಖ ಸಾಕ್ಷಿಯಾಗಿದೆ.

ಇಂಡಿ ಪೊಲೀಸರು ವಿಡಿಯೋ ಆಧಾರದ ಮೇಲೆ ಸುನಂದಾಳನ್ನು ಬಂಧಿಸಿದ್ದು, ಪರಾರಿಯಾದ ಸಿದ್ದಪ್ಪ ಕ್ಯಾತಕೇರಿಯ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಕೊಲೆ ಯತ್ನದಿಂದ ಗಾಯಗೊಂಡ ಬೀರಪ್ಪ ಪೂಜಾರಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆ ದಾಂಪತ್ಯ ನಿಷ್ಠೆಯ ಕೊರತೆಯಿಂದ ವೈವಾಹಿಕ ಜೀವನದಲ್ಲಿ ಉಂಟಾಗಬಹುದಾದ ಗಂಭೀರ ಪರಿಣಾಮಗಳನ್ನು ಬಿಚ್ಚಿಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *