ದೆಹಲಿಯ ಖ್ಯಾತ ಸ್ವಾಮಿ ಚೈತನ್ಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ವಿದ್ಯಾರ್ಥಿನಿಯರಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಸಂಗತಿ ಬಯಲು, 17 ವಿದ್ಯಾರ್ಥಿನಿಯರಿಂದ ಎಫ್‌ಐಆರ್ ದಾಖಲು

Spread the love

ನವದೆಹಲಿ: “ದೆಹಲಿ ಬಾಬಾ” ಎಂದೇ ಪ್ರಸಿದ್ಧರಾಗಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ ಗಂಭೀರ ಲೈಂಗಿಕ ದೌರ್ಜನ್ಯ ಆರೋಪ ಹೊರಬಿದ್ದಿದೆ. ಈ ಬೆನ್ನಲ್ಲೇ ಸ್ವಾಮೀಜಿಯ ಅಶ್ಲೀಲ ವಾಟ್ಸಾಪ್‌ ಸಂದೇಶಗಳು ಬಹಿರಂಗಗೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ದೆಹಲಿಯ ಐಷಾರಾಮಿ ವಸಂತ್ ಕುಂಜ್ ಪ್ರದೇಶದಲ್ಲಿರುವ ಖಾಸಗಿ ನಿರ್ವಹಣಾ ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಸ್ವಾಮೀಜಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ವಿಚಾರ ಬೆಳಕಿಗೆ ಬಂದಿದೆ. ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನ 50 ವಿದ್ಯಾರ್ಥಿನಿಯರ ಮೊಬೈಲ್‌ಗಳಲ್ಲಿ ಪತ್ತೆಯಾದ ವಾಟ್ಸಾಪ್‌ ಸಂದೇಶಗಳು ಕಳೆದ 16 ವರ್ಷಗಳಿಂದ ವಿದ್ಯಾರ್ಥಿನಿಯರ ಮೇಲೆ ನಡೆದ ದೌರ್ಜನ್ಯವನ್ನು ಬಹಿರಂಗಪಡಿಸಿವೆ.

ಅಶ್ಲೀಲ ಮೆಸೇಜ್‌ಗಳ ಬಯಲು
ಸ್ವಾಮಿ ಚೈತನ್ಯಾನಂದ ಒಂದು ಸಂದೇಶದಲ್ಲಿ “ನನ್ನ ಕೋಣೆಗೆ ಬನ್ನಿ… ನಾನು ನಿಮ್ಮನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ಯುತ್ತೇನೆ, ನೀವು ಏನನ್ನೂ ಪಾವತಿಸಬೇಕಾಗಿಲ್ಲ” ಎಂದು ಬರೆದಿರುವುದು ಪತ್ತೆಯಾಗಿದೆ. ಮತ್ತೊಂದು ಸಂದೇಶದಲ್ಲಿ ಮಹಿಳೆಯೊಬ್ಬಳಿಗೆ ಹಣದ ಆಮಿಷ ನೀಡಿದ್ದರೆ, ಇನ್ನೊಂದರಲ್ಲಿ “ನೀನು ನನ್ನ ಮಾತನ್ನು ಕೇಳದಿದ್ದರೆ, ನಿನ್ನನ್ನು ಫೇಲ್ ಮಾಡುತ್ತೇನೆ” ಎಂದು ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.

ಹಿಂದಿನ ದೂರುಗಳಿಗೂ ಕ್ರಮವಿಲ್ಲ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಒಡಿಶಾದಲ್ಲಿ ಜನಿಸಿದ ಈ ಸ್ವಾಮಿ ಕನಿಷ್ಠ 16 ವರ್ಷಗಳಿಂದ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆಂದು ಶಂಕಿಸಲಾಗಿದೆ. ಭಯಾನಕ ಸಂಗತಿಯೆಂದರೆ, ಇದೇ ವಸಂತ್ ಕುಂಜ್ ಆಶ್ರಮದ ವಿದ್ಯಾರ್ಥಿನಿಯೊಬ್ಬಳು ಕೆಲವು ವರ್ಷಗಳ ಹಿಂದೆ ದೂರು ದಾಖಲಿಸಿದ್ದರೂ, ಪೊಲೀಸರು ಅಥವಾ ಆಶ್ರಮದ ಆಡಳಿತ ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿದುಬಂದಿದೆ.

17 ವಿದ್ಯಾರ್ಥಿನಿಯರ ಎಫ್‌ಐಆರ್, ಸ್ವಾಮೀಜಿ ಪರಾರಿಯಾಗಿದ್ದು ಹುಡುಕಾಟ ಜೋರಾಗಿ
ಸದ್ಯಕ್ಕೆ 17 ವಿದ್ಯಾರ್ಥಿನಿಯರು ದೂರು ನೀಡಿದ್ದು, ಸ್ವಾಮಿ ಚೈತನ್ಯಾನಂದ ವಿರುದ್ಧ BNSS ಕಾಯ್ದೆಯ 75(2)/79/351(2) ಕಲಂಗಳಡಿ ಎಫ್‌ಐಆರ್ ದಾಖಲಾಗಿದೆ. ಈ ನಡುವೆ ಸ್ವಾಮೀಜಿ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

ತನಿಖೆಯ ವೇಳೆ ಸ್ವಾಮೀಜಿ ನಕಲಿ ನಂಬರ್‌ ಪ್ಲೇಟ್‌ನೊಂದಿಗೆ ರಾಜತಾಂತ್ರಿಕ ವಾಹನ ಬಳಸಿದ್ದ ಸಂಗತಿಯೂ ಬಹಿರಂಗವಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳು, ಹಾರ್ಡ್‌ ಡಿಸ್ಕ್ ವೀಡಿಯೋ ರೆಕಾರ್ಡರ್‌ ಸೇರಿದಂತೆ ಸಾಕ್ಷ್ಯಗಳನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಹಿಂದೆಯೂ ಹಲವಾರು ಧರ್ಮಗುರುಗಳು ಇಂತಹ ಕೃತ್ಯಗಳಿಂದ ಜೈಲು ಶರಣಾಗಿರುವುದನ್ನು ನೆನಪಿಸಿಕೊಂಡರೆ, ಇದೀಗ ದೆಹಲಿಯಲ್ಲಿಯೂ ಇದೇ ರೀತಿಯ ಘಟನೆ ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *