ಶವವಿಟ್ಟು ಪ್ರತಿಭಟನೆಗೆ ಎಚ್ಚರಿಕೆ: ಸ್ಮಶಾನಕ್ಕೆ ರಸ್ತೆ ಇಲ್ಲ; ಗ್ರಾಮಸ್ಥರಿಗೆ ‘ದೇವರು ವರ ಕೊಟ್ಟರೂ, ಪೂಜಾರಿ ವರ ಕೊಡಲಿಲ್ಲ’ ಎಂಬಂತಾಗಿದೆ! ಸೋಟಕನಾಳ ಗ್ರಾಮಸ್ಥರ ಗೋಳು

Spread the love

ನವಲಗುಂದ :ತಾಲೂಕಿನ ಸೊಟಕನಾಳ ಗ್ರಾಮಸ್ಥರ ಗೋಳು. ಸರ್ಕಾರ ಸ್ಮಶಾನಕ್ಕೆ ಜಾಗ ನೀಡಿದರೂ, ಅಲ್ಲಿಗೆ ಹೋಗಲು ರಸ್ತೆ ಇಲ್ಲ. ಈ ವಿಷಯದ ಬಗ್ಗೆ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದರೆ, ಮುಂದಿನ ಬಾರಿ ಮೃತ ದೇಹವನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಟ್ಟು ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಶನಿವಾರ “ಪಬ್ಲಿಕ್ ಸಮಾಚಾರ” ವೆಬ್ ನ್ಯೂಸ್‌ನಲ್ಲಿ ಪ್ರಕಟವಾದ ವರದಿಯ ಮುಂದುವರೆದ ಭಾಗವಾಗಿ, ಗ್ರಾಮಸ್ಥರು ಸೋಮವಾರ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಶಾಸಕರ ವಿರುದ್ಧ ರೈತ ಮುಖಂಡ ವೀರನಗೌಡ ಹಿರೇಗೌಡರ ಆಕ್ರೋಶ ವ್ಯಕ್ತಪಡಿಸಿದ್ದು, ರೈತರ ಹೊಲಗಳಿಗೆ ರಸ್ತೆ ನಿರ್ಮಿಸಿದ್ದೇವೆ ಎಂದು ಹೇಳಿಕೊಳ್ಳುವ ಶಾಸಕರು, ಸತ್ತವರ ಅಂತ್ಯಸಂಸ್ಕಾರಕ್ಕೆ ಹೋಗುವ ಸ್ಮಶಾನ ರಸ್ತೆಯನ್ನು ನಿರ್ಮಿಸಲು ವಿಳಂಬ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಸೋಮವಾರ ತಾಲೂಕಾ ಪಂಚಾಯಿತಿ ಸಭಾಭವನದಲ್ಲಿ ತಹಶೀಲ್ದಾರ್ ಮತ್ತು ತಾಪಂ ಅಧಿಕಾರಿಗಳು ಈ ಕುರಿತು ಚರ್ಚಿಸಲು ಸಭೆ ಕರೆದಿದ್ದರು. ಸಭೆಯಲ್ಲಿ ಮಾತನಾಡಿದ ಹಿರೇಗೌಡರ, ಸರ್ಕಾರ ಹಲವು ವರ್ಷಗಳ ಹಿಂದೆ ಸ್ಮಶಾನಕ್ಕೆ 20 ಗುಂಟೆ ಜಾಗ ನೀಡಿದೆ, ಆದರೆ ಅಲ್ಲಿಗೆ ಹೋಗಲು ಸೂಕ್ತ ರಸ್ತೆ ಇಲ್ಲ. ಖಾಸಗಿ ಜಮೀನು ಮಾಲೀಕರು ತಮ್ಮ ಜಮೀನುಗಳ ಮೂಲಕ ಹಾದುಹೋಗಲು ಅವಕಾಶ ನೀಡದಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದರು.

ಗ್ರಾಮಸ್ಥರಾದ ಶಿವು ಗುಡಸಲಮನಿ ಮಾತನಾಡಿ, ಇತ್ತೀಚೆಗೆ ನಿಧನರಾದ ಮಲ್ಲವ್ವ ಆನಂದಿ ಎಂಬುವವರ ಶವವನ್ನು ತಹಶೀಲ್ದಾರ್ ಕಚೇರಿಗೆ ತಂದು ಪ್ರತಿಭಟಿಸಲು ನಿರ್ಧರಿಸಲಾಗಿತ್ತು. ಆಗ ತಹಶೀಲ್ದಾರ್ ಅವರು ರಸ್ತೆ ನಿರ್ಮಿಸುವ ಭರವಸೆ ನೀಡಿದ ಕಾರಣ ಪ್ರತಿಭಟನೆ ಹಿಂಪಡೆಯಲಾಯಿತು. ಆದರೆ ಇಂದಿನ ಸಭೆಗೆ ತಹಶೀಲ್ದಾರ್ ಸುಧೀರ್ ಸಾಹುಕಾರ್ ಅವರೇ ಗೈರು ಹಾಜರಾಗಿರುವುದು ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತದೆ. ಕೂಡಲೇ ರಸ್ತೆ ನಿರ್ಮಿಸದಿದ್ದರೆ, ಗ್ರಾಮಸ್ಥರು ಮತ್ತೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಅವರು ಎಚ್ಚರಿಕೆ ನೀಡಿದರು.

ತಾಪಂ ಯೋಜನಾಧಿಕಾರಿ ಬಿ.ಎಸ್. ಪಾಟೀಲ್ ಮಾತನಾಡಿ, ಸಭೆಯಲ್ಲಿ ನಡೆದ ವಿಷಯಗಳು ಮತ್ತು ಗ್ರಾಮಸ್ಥರ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ಎಸ್.ಬಿ. ತೋಟದ, ಕೆ.ಎಂ. ಕೋಳಿ, ವಾಸುದೇವ ಮುಕ್ಕಣ್ಣವರ, ಎಂ.ಎಸ್. ಹೂಗಾರ ಮತ್ತು ಗ್ರಾಮಸ್ಥರಾದ ಚನ್ನಪ್ಪಗೌಡ ಹಿರೇಗೌಡರ, ನಾಗರಾಜ ತಳವಾರ, ಸಂಕ್ರಪ್ಪ ಚಲವಾದಿ, ಅಶೋಕ ಕೊಣ್ಣೂರ, ಶಿವಾನಂದ ಚಿಕ್ಕನರಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸರ್ಕಾರ ಸ್ಮಶಾನಕ್ಕೆ ಜಾಗ ನೀಡಿದರೂ, ದಾರಿ ಮಾಡಿಕೊಡಲು ತಾಲ್ಲೂಕು ಆಡಳಿತ ಏಕೆ ಹಿಂದೆ ಸರಿಯುತ್ತಿದೆ ಎಂಬುದು ಗ್ರಾಮಸ್ಥರ ಪ್ರಮುಖ ಪ್ರಶ್ನೆಯಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ತೆರೆದು ಸ್ಮಶಾನ ರಸ್ತೆ ನಿರ್ಮಿಸಿಕೊಡುತ್ತಾರೆಯೇ ಎಂದು ಕಾದು ನೋಡಬೇಕು.

Leave a Reply

Your email address will not be published. Required fields are marked *