ಸ್ಪೀಕರ್ ಯು.ಟಿ. ಖಾದರ್ ಮೇಲಿನ ಆರೋಪಗಳ ನ್ಯಾಯಾಂಗ ತನಿಖೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹ

Spread the love

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಹಾಲಿ ಸ್ಪೀಕರ್ ಯು.ಟಿ. ಖಾದರ್ ಅವರ ಅವಧಿಯಲ್ಲಿ ವಿಧಾನಸಭೆಯಲ್ಲಿ ನಡೆದಿರುವ ಟೆಂಡರ್ ಪ್ರಕ್ರಿಯೆ, ಖರೀದಿಗಳು ಮತ್ತು ವಿದೇಶ ಪ್ರವಾಸಗಳ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದು, ಈ ಎಲ್ಲಾ ವಿವಾದ, ಗೊಂದಲ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ಕಾರ್ಯನಿರತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳವಾರದಂದು (ಅಕ್ಟೋಬರ್ 28) ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೀಕರ್ ಸ್ಥಾನದ ಘನತೆ ಮತ್ತು ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಈ ತನಿಖೆ ಅಗತ್ಯ ಎಂದು ಪ್ರತಿಪಾದಿಸಿದರು.

ಖರೀದಿ ಪ್ರಕ್ರಿಯೆಗಳ ಮೇಲೆ ಗಂಭೀರ ಅನುಮಾನ
ವಿಧಾನಸಭೆಯಲ್ಲಿ ನಡೆದಿರುವ ವಿವಿಧ ಖರೀದಿ ಮತ್ತು ಕಾಮಗಾರಿಗಳ ಕುರಿತು ಕಾಗೇರಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಧಾನಸಭೆಯ ಪ್ರಧಾನ ಬಾಗಿಲಿಗೆ ರೋಸ್‌ವುಡ್‌ನ ಮರದ ಕೆತ್ತನೆಯ ಚೌಕಟ್ಟನ್ನು ಮಾಡಿಸಿದ್ದು, ಸಭಾಂಗಣಕ್ಕೆ ಹೊಸ ಟಿ.ವಿ. ಸೆಟ್ ಅಳವಡಿಕೆ, ಎಐ ಮಾನಿಟರ್ ಸಿಸ್ಟಂ ಅಳವಡಿಕೆ, ಶಾಸಕರಿಗೆ ಗಂಡಭೇರುಂಡ ಹೋಲಿಕೆಯ ಗಡಿಯಾರಗಳನ್ನು ನೀಡಿರುವ ಬಗ್ಗೆ ಹಾಗೂ ಮೊಗಸಾಲೆಯಲ್ಲಿ ಯಂತ್ರ ಅಳವಡಿಸಿ ಮಸಾಜ್ ಪಾರ್ಲರ್ ಮಾದರಿಯಲ್ಲಿ ಬದಲಾಯಿಸಿದ್ದಕ್ಕೆ ದೊಡ್ಡ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿಸಿದರು.

ಶಾಸಕರ ಭವನದಲ್ಲಿ ಶಾಸಕರ ಕೊಠಡಿಗಳನ್ನು ಭದ್ರಪಡಿಸಲು ಅಳವಡಿಸಲಾದ ಸ್ಮಾರ್ಟ್ ಡೋರ್ ಲಾಕರ್ ಮತ್ತು ಸ್ಮಾರ್ಟ್ ಸೇಫ್ ಲಾಕರ್‌ಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸದ ಆರೋಪ ಮಾಡಿದರು. ಆನ್‌ಲೈನ್‌ನಲ್ಲಿ ₹14 ರಿಂದ 16 ಸಾವಿರಕ್ಕೆ ಸಿಗುವ ಡೋರ್ ಲಾಕರ್‌ಗೆ ₹49 ಸಾವಿರಕ್ಕಿಂತ ಹೆಚ್ಚು ಮತ್ತು ₹8 ರಿಂದ 9 ಸಾವಿರಕ್ಕೆ ಸಿಗುವ ಸ್ಮಾರ್ಟ್ ಸೇಫ್ ಲಾಕರ್‌ಗೆ ₹35 ಸಾವಿರದ ಮೇಲೆ ದರ ವಿಧಿಸಲಾಗಿದೆ ಎಂದು ದೂರಿದರು. ಅಲ್ಲದೆ, ಮಾರುಕಟ್ಟೆಯಲ್ಲಿ ಸುಮಾರು ₹30 ಸಾವಿರಕ್ಕೆ ಲಭ್ಯ ಇರುವ ಸ್ಮಾರ್ಟ್ ಎನರ್ಜಿ ಸೊಲ್ಯೂಷನ್‌ಗೆ ₹90,500 ವಿಧಿಸಲಾಗಿದೆ ಎಂದು ಅಂಕಿ-ಅಂಶಗಳನ್ನು ನೀಡಿದರು.

ಬಾಹ್ಯ ಬೆಂಬಲದ ಆರೋಪ ಮತ್ತು ವಿದೇಶ ಪ್ರವಾಸದ ಬಗ್ಗೆ ಪ್ರಶ್ನೆ
ಸ್ಪೀಕರ್ ಕಾರ್ಯಾಲಯದ ಟೆಂಡರ್‌ಗಳು ಕೇವಲ ಮಂಗಳೂರು ಮೂಲದ ಕೆಲವರಿಗೆ ಮಾತ್ರ ಯಾಕೆ ಸಿಗುತ್ತಿದೆ ಎಂದು ಪ್ರಶ್ನಿಸಿದ ಕಾಗೇರಿ, ಖರೀದಿ ಪ್ರಕ್ರಿಯೆಗಳನ್ನು ಹಣಕಾಸು ಇಲಾಖೆ ತಿರಸ್ಕರಿಸಿದ ನಂತರ, ಹಣಕಾಸು ಇಲಾಖೆ ಹೊಣೆ ಹೊತ್ತ ಮುಖ್ಯಮಂತ್ರಿಗಳೇ ಒಪ್ಪಿಗೆ ಕೊಟ್ಟಿರುವ ಆರೋಪವಿದೆ. ಈ ಮೂಲಕ ಸ್ಪೀಕರ್‌ಗೆ ಸ್ವತಃ ಸಿಎಂ ಅವರೇ ಬೆಂಬಲ ನೀಡಿದ ಆಕ್ಷೇಪವಿದೆ ಎಂದು ದೂರಿದರು.

ಶಾಸಕರಿಗೆ ನೀಡಲಾದ ಊಟ, ಉಪಹಾರದ ವ್ಯವಸ್ಥೆಯ ಅಗತ್ಯದ ಕುರಿತು ಪ್ರಶ್ನೆ ಮಾಡಿದ ಕಾಗೇರಿ, ನಾಲ್ಕು-ಐದು ದಿನಗಳ ಪುಸ್ತಕ ಮೇಳಕ್ಕೆ ₹4.5 ಕೋಟಿ ಖರ್ಚು ಮಾಡಿರುವುದು ಅನುಮಾನಾಸ್ಪದವಾಗಿದೆ. “ಪುಸ್ತಕ ಕೊಂಡು ಹಂಚಿದರೂ ಇಷ್ಟಾಗುತ್ತಿತ್ತೇ ಗೊತ್ತಿಲ್ಲ” ಎಂದು ಆಕ್ಷೇಪಿಸಿದರು.

ವಿದೇಶ ಪ್ರವಾಸದ ವಿವರ ಬಹಿರಂಗಕ್ಕೆ ಆಗ್ರಹ
ಸ್ಪೀಕರ್ ಯು.ಟಿ. ಖಾದರ್ ಅವರು ವಿದೇಶ ಪ್ರವಾಸದ ಮೇಲೆ ಇರುವ ಬಗ್ಗೆ ಪ್ರಸ್ತಾಪಿಸಿದ ಕಾಗೇರಿ, ಸ್ಪೀಕರ್ ಅವರು ಎಷ್ಟು ದೇಶಗಳಿಗೆ ಹೋಗಿದ್ದಾರೆ? ಎಷ್ಟು ಖರ್ಚು ಹಾಕಿ ಸರಕಾರ ಎಷ್ಟು ಹಣ ಕೊಟ್ಟಿದೆ? ಅವರಿಗೆ ಇರುವ ಅವಕಾಶ ಮೀರಿ ಎಷ್ಟು ಪ್ರವಾಸ ಮಾಡಿದ್ದಾರೆ? ಯಾರ್ಯಾರ ಜೊತೆ ಪ್ರವಾಸ ಮಾಡಿದ್ದಾರೆ? ಈ ಎಲ್ಲಾ ವಿದೇಶಗಳ ಅಧ್ಯಯನದ ಹೆಸರಿನಲ್ಲಿ ನಡೆದ ಪ್ರವಾಸದ ವಿವರಗಳನ್ನು ಸರ್ಕಾರ ಕೂಡಲೇ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.

“ಯು.ಟಿ. ಖಾದರ್ ಅವರು ಸ್ಪೀಕರ್ ಹುದ್ದೆಯ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಪಕ್ಷಪಾತಿಯಾಗಿದ್ದಾರೆ ಮತ್ತು ಆಡಳಿತ ಸುಧಾರಣೆ ಹೆಸರಿನಲ್ಲಿ ಅನೇಕ ಭ್ರಷ್ಟಾಚಾರಗಳು ನಡೆಯುತ್ತಿವೆ” ಎಂದು ಕಾಗೇರಿ ಆರೋಪಿಸಿದರು. ಪ್ರಜಾಪ್ರಭುತ್ವದ ದೇಗುಲವಾದ ಶಾಸಕಾಂಗದ ಪ್ರಮುಖ ಸ್ಥಾನದ ಮೇಲೆ ಇಂತಹ ಆರೋಪಗಳು ಬರುತ್ತಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಅಂಚಿನಲ್ಲಿರುವಾಗ ದೊಡ್ಡ ದುರಂತ ಎಂದು ವಿಶ್ಲೇಷಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ ಮತ್ತು ಮಾಜಿ ಸದಸ್ಯ ಅರುಣ್ ಶಹಾಪುರ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *