
ವಿಜಯನಗರ (ಕಾನಾಹೊಸಹಳ್ಳಿ )ರಾಜ್ಯ ಸರ್ಕಾರದ ಜನಪ್ರಿಯ ‘ಗೃಹಲಕ್ಷ್ಮಿ’ ಯೋಜನೆಯಿಂದ ದೊರೆತ ಹಣದಲ್ಲಿ, ಒಂದು ಬಡ ದಂಪತಿ ತಮ್ಮ ಮನೆಯ ಮುಖ್ಯ ಬಾಗಿಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಮತ್ತು ಹೆಸರನ್ನು ಕೆತ್ತಿಸಿ ಅಪಾರ ಅಭಿಮಾನ ಮೆರೆದಿದ್ದಾರೆ. ವಿಜಯನಗರ ಜಿಲ್ಲೆಯ ಗಡಿ ಗ್ರಾಮವಾದ ಕೆಂಚಮಲ್ಲನಹಳ್ಳಿಯಲ್ಲಿ ನಡೆದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
₹28 ಸಾವಿರ ವೆಚ್ಚದ ಬಾಗಿಲು
ಗ್ರಾಮದ ಕೆ.ಎಂ. ತಿಪ್ಪೇಸ್ವಾಮಿ ಮತ್ತು ಅವರ ಪತ್ನಿ ಪಾರ್ವತಮ್ಮ ಈ ವಿಶಿಷ್ಟ ಕಾರ್ಯ ಮಾಡಿದ್ದಾರೆ. ಪಾರ್ವತಮ್ಮ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿದ್ದು, ಕಳೆದ 15 ತಿಂಗಳಿಂದ ತಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿದ್ದ ಮಾಸಿಕ ₹2,000 ಹಣವನ್ನು ಖರ್ಚು ಮಾಡದೆ ಕೂಡಿಟ್ಟಿದ್ದರು. ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿದ್ದ ತಮ್ಮ ಮನೆಯ ಬಾಗಿಲು ಶಿಥಿಲಗೊಂಡಿದ್ದರಿಂದ, ಇದೇ ಹಣದಲ್ಲಿ ಹೊಸ ಬಾಗಿಲು ಮಾಡಿಸುವ ನಿರ್ಧಾರ ಕೈಗೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಇರುವ ಅಭಿಮಾನದಿಂದ, ₹28 ಸಾವಿರ ವೆಚ್ಚದಲ್ಲಿ ಸ್ಥಳೀಯ ಕುಶಲಕರ್ಮಿ ದುರ್ಗೇಶ್ ಅವರ ಮೂಲಕ ಬಾಗಿಲು ಮಾಡಿಸಿದ್ದಾರೆ. ಬಾಗಿಲಿನ ಮೇಲ್ಭಾಗದಲ್ಲಿ ‘ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು, ಮಧ್ಯದಲ್ಲಿ ಅವರ ಭಾವಚಿತ್ರವನ್ನು ಮತ್ತು ಕೆಳಭಾಗದಲ್ಲಿ ‘ಗೃಹಲಕ್ಷ್ಮಿ ಯೋಜನೆ’ ಎಂದು ಕೆತ್ತಿಸಿ ಅಭಿಮಾನ ಮೆರೆದಿದ್ದಾರೆ.
ಸಿದ್ದರಾಮಯ್ಯ ಅಂದ್ರೆ ನಮಗೆ ಪ್ರಾಣ’
ಪಾರ್ವತಮ್ಮ ಮತ್ತು ತಿಪ್ಪೇಸ್ವಾಮಿ ದಂಪತಿ ಮಾತನಾಡಿ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದ್ರೆ ನಮಗೆ ಪ್ರಾಣ. ಅವರು ಬಡವರು, ಹಿಂದುಳಿದವರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗಗಳ ಉದ್ಧಾರಕ್ಕಾಗಿ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರಂತಹ ಪುಣ್ಯಾತ್ಮನ ಫೋಟೋವನ್ನು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ನೋಡಬೇಕೆಂಬ ಆಸೆಯಿಂದ, ಗೃಹಲಕ್ಷ್ಮಿ ಹಣದಲ್ಲೇ ಹೊಸ ಬಾಗಿಲು ಮಾಡಿಸಿ ಅವರ ಹೆಸರು ಮತ್ತು ಫೋಟೋ ಹಾಕಿಸಿದೆವು,” ಎಂದು ಸಂತೋಷದಿಂದ ತಿಳಿಸಿದರು.
ಗೃಹಲಕ್ಷ್ಮಿ ಕೃಪೆಗೆ ಸಾಕ್ಷಿ
ಗ್ಯಾರಂಟಿ ಅನುಷ್ಠಾನ ಸಮಿತಿಯ ವಿಜಯನಗರ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, “ತಾಲ್ಲೂಕು ಮಟ್ಟದಲ್ಲಿ 15 ಜನ ಸದಸ್ಯರ ತಂಡ ರಚಿಸಿ ‘ಗ್ಯಾರಂಟಿ ಯೋಜನೆಗಳ ನಡೆ, ಗ್ರಾ.ಪಂ. ಕಡೆ’ ಎನ್ನುವ ಕಾರ್ಯಕ್ರಮದ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಈ ಕುಟುಂಬವು ಮುಖ್ಯಮಂತ್ರಿಗಳ ಭಾವಚಿತ್ರವನ್ನು ತಮ್ಮ ಮನೆಯ ಬಾಗಿಲಲ್ಲಿ ಕೆತ್ತನೆ ಮಾಡಿಸುವ ಮೂಲಕ ಕೃತಜ್ಞತೆ ಸಲ್ಲಿಸಿದೆ. ಇದೊಂದು ಅತೀವ ಸಂತೋಷದ ವಿಷಯ. ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಲಾಭ ಪಡೆದು ಉದ್ಯೋಗ ಕಟ್ಟಿಕೊಂಡವರನ್ನು ಗುರುತಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಿದಾಗ ಅವರ ಕೈಯಿಂದಲೇ ಸನ್ಮಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ,” ಎಂದು ಹೇಳಿದರು.

