
ಗದಗ: ಇಲ್ಲಿನ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ‘ಶಿಕ್ಷಣದಲ್ಲಿ ಲಲಿತ ಕಲೆ ಮತ್ತು ರಂಗಭೂಮಿ ಜನಪದ ಸಂಭ್ರಮ’ ಹಾಗೂ ವಿವಿಧ ಶಾಸ್ತ್ರೋಕ್ತ ಪೂಜಾ ಕಾರ್ಯಕ್ರಮಗಳು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿದವು. ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಕುಂಭಮೇಳವು ಜನಪದ ಕಲೆಗಳಾದ ಡೊಳ್ಳು ಕುಣಿತ, ಹಲಗೆ ವಾದನ ಹಾಗೂ ಪಿಪಿ ಊದುವಿಕೆಯೊಂದಿಗೆ ಕಳೆಗಟ್ಟಿತ್ತು. ಸಾಂಪ್ರದಾಯಿಕ ಇಳಕಲ್ ಸೀರೆಯಲ್ಲಿ ಮಿಂಚುತ್ತಿದ್ದ ಮಹಿಳಾ ಪ್ರಶಿಕ್ಷಣಾರ್ಥಿಗಳು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರೆ, ಪುರುಷ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಂಚೆ, ಜುಬ್ಬಾ ಮತ್ತು ರುಮಾಲು ಧರಿಸಿ ಸಂಸ್ಕೃತಿಯ ರಾಯಭಾರಿಗಳಂತೆ ಕಂಡುಬಂದರು.
ನಂತರ ಡಾ. ಬಿ.ಎಫ್. ದಂಡಿನ್ ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಸಹನಾ ಜೇನಕಟ್ಟಿ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ, ಪ್ರಾಚಾರ್ಯರಾದ ಡಾ. ಎಂ.ಪಿ. ಚಳಗೇರಿ ಅವರು ಅತಿಥಿಗಳನ್ನು ಸ್ವಾಗತಿಸಿ, ಶಿಕ್ಷಣದಲ್ಲಿ ಜನಪದ ಕಲೆಗಳ ಅಗತ್ಯತೆ ಹಾಗೂ ವಿವಿಧ ಪೂಜಾ ಶಾಸ್ತ್ರಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಶೀಲಾ ರವೀಂದ್ರನಾಥ್ ದಂಡಿನ್ ಅವರು, ಕಾಲೇಜಿನ ಈ ಜನಪದ ಸಂಭ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿ, ಸಾಂಪ್ರದಾಯಿಕ ಮೌಲ್ಯಗಳನ್ನು ಉಳಿಸುವ ಇಂತಹ ಪ್ರಯತ್ನಗಳು ಶ್ಲಾಘನೀಯ ಎಂದರು.
ವೇದಿಕೆಯ ಮೇಲೆ ಅತಿಥಿಗಳ ಸಮ್ಮುಖದಲ್ಲಿ ಅರಿಶಿಣ-ಕುಂಕುಮ ಹಾಗೂ ಕಂಕಣ ಕಟ್ಟುವ ಶಾಸ್ತ್ರಗಳು ವಿಧಿಬದ್ಧವಾಗಿ ನೆರವೇರಿದವು. ಮಲ್ಲಿಕಾರ್ಜುನ್ ಅವರು ಅರಿಶಿಣ-ಕುಂಕುಮದ ಮಹತ್ವವನ್ನು ವಿವರಿಸಿದರೆ, ಗೌತಮ್ ಅವರು ಬಳೆಗಾರನ ವೇಷಧರಿಸಿ ನೆರವೇರಿಸಿದ ಬಳೆ ಶಾಸ್ತ್ರ ಎಲ್ಲರ ಗಮನ ಸೆಳೆಯಿತು. ಇದರೊಂದಿಗೆ ಬೀಸುಕಲ್ಲು ಹಾಗೂ ಒಳಕಲ್ಲಿನ ಶಾಸ್ತ್ರಗಳು ಹಿನ್ನೆಲೆ ಗಾಯನದೊಂದಿಗೆ ಜರುಗಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು. ಅಧ್ಯಕ್ಷತೆ ವಹಿಸಿದ್ದ ಗೀತಾಂಜಲಿ ಶಾಂತಣ್ಣ ಕಡಿವಾಲ ಅವರು ಶ್ರೀರಾಮನ ಸ್ತೋತ್ರದೊಂದಿಗೆ ಅರಿಶಿಣ-ಕುಂಕುಮ, ಕುಂಭ ಹಾಗೂ ಜನಪದ ಕಲೆಗಳ ಮಹತ್ವವನ್ನು ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಶೀಲಾ ರವೀಂದ್ರನಾಥ್ ಅವರಿಗೆ ಸನ್ಮಾನಿಸಲಾಯಿತು. ಮಧ್ಯಾಹ್ನ ಎಲ್ಲರಿಗೂ ಬಾಳೆ ಎಲೆಯ ಸಾಂಪ್ರದಾಯಿಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಗೊಳ್ಳಿ ರಾಯಣ್ಣ, ಭಗತ್ ಸಿಂಗ್ ಹಾಗೂ ಸುಭಾಷ್ ಚಂದ್ರ ಬೋಸ್ ತಂಡದವರಿಂದ ಜಾನಪದ ನೃತ್ಯ ಹಾಗೂ ಕೋಲಾಟದ ಪ್ರದರ್ಶನಗಳು ವಿಜೃಂಭಣೆಯಿಂದ ನಡೆದವು. ರಾಜಶ್ರೀ ಹಾಗೂ ರೇಣುಕಾ ಕಾರ್ಯಕ್ರಮ ನಿರೂಪಿಸಿದರೆ, ಶಶಿಕಾಂತ್ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀಮತಿ ಎನ್.ಡಿ. ಶೇಕ್, ಎಚ್.ಆರ್. ಕುರಿ, ಆರ್.ಎಸ್. ಪಾಟೀಲ್, ಪಿ.ಎಸ್. ಹೆಗ್ಡೆ, ಎಂ.ಆರ್. ಭಟ್, ಬಸನಾಳ, ಬೆಳಗಲಿ ಗುರುಗಳು, ಜೆ.ಸಿ. ಹಿರೇಮಠ್ ಹಾಗೂ ಆಶಾ ಪಾಟೀಲ್ ಸೇರಿದಂತೆ ನೂರಾರು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

