
ಹನೂರು: ಕರ್ನಾಟಕ ರಾಜ್ಯ ರೈತ ಸಂಘವು ಹನೂರು ತಾಲ್ಲೂಕಿನ ರೈತರ ಹಿತರಕ್ಷಣೆಗಾಗಿ ಹಮ್ಮಿಕೊಂಡಿದ್ದ ನಿರಂತರ ಹೋರಾಟ ಹಾಗೂ ಬೆಂಗಳೂರು ವಿಧಾನಸೌಧ ಚಲೋ ಪಾದಯಾತ್ರೆಗೆ ಪ್ರತಿಫಲ ದೊರೆತಿದ್ದು, ರಾಜ್ಯ ಬಜೆಟ್‌ನಲ್ಲಿ ಉಡುತೊರೆಹಳ್ಳ ಏತ ನೀರಾವರಿ ಯೋಜನೆಗೆ 490 ಕೋಟಿ ರೂಪಾಯಿ ಘೋಷಿಸಿರುವುದು ರೈತ ಸಂಘದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೆ ಗೌಡ ತಿಳಿಸಿದರು. ಹನೂರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅತ್ಯಂತ ಹಿಂದುಳಿದ ತಾಲ್ಲೂಕಾಗಿರುವ ಹನೂರಿನಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ರೈತರು ಬದುಕಿಗಾಗಿ ಬೇರೆ ಊರುಗಳಿಗೆ ಗುಳೆ ಹೋಗುವ ದಯನೀಯ ಸ್ಥಿತಿ ಎದುರಾಗಿತ್ತು. ಈ ಗಂಭೀರ ಪರಿಸ್ಥಿತಿಯನ್ನು ಅರಿತು ಸರ್ಕಾರವು ಈಗ ಉಡುತೊರೆಹಳ್ಳ ಜಲಾಶಯಕ್ಕೆ ಕಾವೇರಿ ನದಿಯಿಂದ 1.31 ಟಿಎಂಸಿ ನೀರು ಒದಗಿಸುವ ಯೋಜನೆಗೆ ಅನುಮೋದನೆ ನೀಡಿ ಹಣಕಾಸು ಒದಗಿಸಿರುವುದು ಸ್ವಾಗತಾರ್ಹ ಎಂದರು.
ಈ ಮಹತ್ವಾಕಾಂಕ್ಷಿ ಯೋಜನೆಯ ಜಾರಿಗೆ ಶ್ರಮಿಸಿದ ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್, ಮಾಜಿ ಶಾಸಕ ಆರ್. ನರೇಂದ್ರ, ಸಂಸದ ಸುನೀಲ್ ಬೋಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಸೇರಿದಂತೆ ಹನೂರು ತಾಲ್ಲೂಕಿನ ರೈತಪರ ದನಿಗೂಡಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು. ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ಹನೂರು ತಾಲ್ಲೂಕಿನ ಒಣ ಭೂಮಿಗೆ ನೀರು ಹರಿಸಬೇಕೆಂಬುದು ರೈತರ ದಶಕಗಳ ಬೇಡಿಕೆಯಾಗಿತ್ತು. ಈ ಬಜೆಟ್ ಘೋಷಣೆಯಿಂದ ರೈತರ ಜಮೀನುಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ದೊರೆಯುವ ಆಶಯ ಮೂಡಿದೆ. ಇದೇ ವೇಳೆ ಅವರು, ಸತ್ತೇಗಾಲದ ಶಿವಾ ಆಣೆಕಟ್ಟೆಯಿಂದ ತಾಲ್ಲೂಕಿನ ಪ್ರಮುಖ ಕೆರೆಗಳಾದ ಮಣಗಳ್ಳಿ, ಬಂಡಳ್ಳಿ, ಹಲಗಾಪುರ, ಹಾಲೇರಿ ಕೆರೆ ಸೇರಿದಂತೆ ವಿವಿಧ ಕಿರು ಜಲಾಶಯಗಳಿಗೆ ನೀರು ತುಂಬಿಸುವ 419 ಕೋಟಿ ರೂಪಾಯಿಗಳ ಪರಿಷ್ಕೃತ ಯೋಜನಾ ವರದಿಗೂ ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಬೇಕು. ಇದರಿಂದ ಮಾರ್ಟಳ್ಳಿ, ರಾಮಾಪುರ ಸೇರಿದಂತೆ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಗುಳೆ ಹೋಗುವುದನ್ನು ತಪ್ಪಿಸಬಹುದು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಬಗ್ಗೆ ಗಮನಸೆಳೆದ ಗೌಡೆ ಗೌಡ ಅವರು, ಗೋಪಿನತ್ತಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ, ಜಂಬೂಪಟ್ಟಿ, ಪುದುಕಾಡು ಸೇರಿದಂತೆ ಹಲವು ಅರಣ್ಯ ಗ್ರಾಮಗಳ ನಿವಾಸಿಗಳಿಗೆ ಇಂದಿಗೂ ವಿದ್ಯುತ್, ಕುಡಿಯುವ ನೀರು ಹಾಗೂ ರಸ್ತೆಯಂತಹ ಮೂಲಭೂತ ಸೌಕರ್ಯಗಳಿಲ್ಲ. ಯಾವುದೇ ಸರ್ಕಾರಗಳು ಇವರಿಗೆ ಹಕ್ಕುಪತ್ರ ನೀಡಿಲ್ಲದಿರುವುದು ವಿಷಾದನೀಯ. ರಾಜ್ಯ ಸರ್ಕಾರವು ಕೂಡಲೇ ಈ ಬಗ್ಗೆ ಗಮನಹರಿಸಿ ಅರಣ್ಯವಾಸಿಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು. ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ವಿವಿಧ ಜಿಲ್ಲಾ ಮುಖಂಡರ ಮಾರ್ಗದರ್ಶನದಲ್ಲಿ ನಡೆದ ಈ ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಗೋಷ್ಠಿಯಲ್ಲಿ ಹನೂರು ತಾಲ್ಲೂಕು ಅಧ್ಯಕ್ಷ ಅಮ್ಜಾದ್ ಖಾನ್, ಗೌರವ ಅಧ್ಯಕ್ಷ ರಾಜಣ್ಣ, ಸಂಘಟನಾ ಕಾರ್ಯದರ್ಶಿ ಬಸವರಾಜು, ಪಳನಿಸ್ವಾಮಿ, ಕನಕಮ್ಮ, ಲೋಕೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ವರದಿ: ಬಂಗಾರಪ್ಪ ಸಿ.

