

ಧಾರವಾಡ: ಜಾನಪದ ಹಾಡುಗಳು ಗ್ರಾಮೀಣ ಬದುಕಿನ ನೋವು-ನಲಿವುಗಳ ಸಮಗ್ರ ಚಿತ್ರಣ ನೀಡುತ್ತವೆ. ನಮ್ಮ ಪೂರ್ವಜರ ಈ ಸಂಪ್ರದಾಯಿಕ ಕಲೆಗಳು ಮನಸ್ಸನ್ನು ಉಲ್ಲಸಿತಗೊಳಿಸುವುದರ ಜೊತೆಗೆ ಸಂಸ್ಕೃತಿಯನ್ನು ಉಳಿಸುತ್ತವೆ ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಜಯಶ್ರೀ ಗುತ್ತಲ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-೨೦೨೫’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಮಹಿಳೆಯರು ಕುಟುಂಬ ನಿರ್ವಹಣೆಯ ಜೊತೆಗೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಪೂರ್ಣಾ ಪಾಟೀಲ ಮಾತನಾಡಿ, ಜಾನಪದವು ಜೀವನದ ನೈಜತೆಯನ್ನು ಪ್ರತಿಬಿಂಬಿಸುತ್ತದೆ. ಕುಟ್ಟುವಾಗ, ಬೀಸುವಾಗ, ಹಬ್ಬಗಳಲ್ಲಿ ಮತ್ತು ಮದುವೆ ಸಮಾರಂಭಗಳಲ್ಲಿ ಮಹಿಳೆಯರು ಹಾಡುವ ಹಾಡುಗಳು ನೈಜ ಚಿತ್ರಣವನ್ನು ಒಳಗೊಂಡಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಾ. ಹನಮಂತ ಡಂಬಳ ಮಾತನಾಡಿ, ಜಯಶ್ರೀ ಗುತ್ತಲ ಅವರು ಇಂದು ಭೌತಿಕವಾಗಿ ಇಲ್ಲದಿದ್ದರೂ, ಎಸ್.ಬಿ. ಗುತ್ತಲ ಅವರು ದತ್ತಿ ಇಡುವುದರ ಮೂಲಕ ಅವರನ್ನು ಜೀವಂತವಾಗಿರಿಸಿದ್ದಾರೆ. ಸಂಗೀತ ಪರಂಪರೆಯಿಂದ ಬಂದ ಜಯಶ್ರೀ ಗುತ್ತಲ ಅವರು ಜಾನಪದದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಸ್ಪರ್ಧೆಯಲ್ಲಿ 36 ಮಹಿಳಾ ಮಂಡಳಗಳ ಭಾಗಿ
ಕಾರ್ಯಕ್ರಮದ ಅಂಗವಾಗಿ ನಡೆದ ಮೂಲ ಜಾನಪದ ಹಾಡುಗಳ ಸ್ಪರ್ಧೆಯನ್ನು ಡಾ. ಆನಂದ ಪಾಂಡುರಂಗಿ ಉದ್ಘಾಟಿಸಿದರು.
ಸ್ಪರ್ಧೆಯಲ್ಲಿ ಒಟ್ಟು ೩೬ ಮಹಿಳಾ ಮಂಡಳಗಳು ಭಾಗವಹಿಸಿದ್ದವು. ಹುಬ್ಬಳ್ಳಿಯ ವಾಗ್ದೇವಿ ಮಹಿಳಾ ಮಂಡಳ ಪ್ರಥಮ ಸ್ಥಾನ ಗಳಿಸಿ ‘ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-೨೦೨೫’ ಪ್ರಶಸ್ತಿಯನ್ನು ಪಡೆದುಕೊಂಡಿತು. ಹುಬ್ಬಳ್ಳಿಯ ಶ್ರೀಗೌರಿ ಭಜನಾ ಮಂಡಳ ದ್ವಿತೀಯ ಹಾಗೂ ಧಾರವಾಡದ ರುಕ್ಮಿಣಿ ಪಾಂಡುರಂಗ ಭಜನಾ ಮಂಡಳ ತೃತೀಯ ಬಹುಮಾನ ಪಡೆದರು.
ಧಾರವಾಡದ ತುಂಗಭದ್ರಾ ಮಹಿಳಾ ವೇದಿಕೆ, ಗಾನ ಚಿಂತನಾ ಮಹಿಳಾ ಮಂಡಳ ಮತ್ತು ಶ್ರೀರಾಮ ಜಯರಾಮ ಗುಂಪು ಮಹಿಳಾ ಮಂಡಳಕ್ಕೆ ಸಮಾಧಾನಕರ ಬಹುಮಾನ ನೀಡಲಾಯಿತು. ಸ್ಪರ್ಧೆಗೆ ಎನ್.ಆರ್. ಕುಲಕರ್ಣಿ, ವಿಜಯೇಂದ್ರ ಅರ್ಚಕ ಮತ್ತು ಶ್ರುತಿ ಕುಲಕರ್ಣಿ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.
ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಕೃತಿಕಾ ಸತ್ಯಬೋಧ ಗುತ್ತಲ ಅವರು ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ದತ್ತಿ ದಾನಿ ಎಸ್.ಬಿ. ಗುತ್ತಲ ಅವರು ದತ್ತಿಯ ಬಗ್ಗೆ ಮಾತನಾಡಿದರು. ಶಂಕರ ಕುಂಬಿ ಸ್ವಾಗತಿಸಿದರು. ವಿಶ್ವೇಶ್ವರಿ ಬಿ. ಹಿರೇಮಠ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ, ಶ್ರೀಧರ ಕುಲಕರ್ಣಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

