ರೇಬಿಸ್ ನಿಯಂತ್ರಣಕ್ಕೆ ಲಸಿಕೆಯೇ ಅಸ್ತ್ರ: ಸಾಕು ಪ್ರಾಣಿಗಳಿಗೆ ಒಂದು ತಿಂಗಳು ಉಚಿತ ಲಸಿಕೆ; ಧಾರವಾಡದಲ್ಲಿ ತಾಂತ್ರಿಕ ಕಾರ್ಯಾಗಾರ

Spread the love

ಧಾರವಾಡ: ರೇಬಿಸ್ ಒಂದು ಗಂಭೀರ ಪ್ರಾಣಿಜನ್ಯ ರೋಗವಾಗಿದ್ದು, ಪ್ರಾಣಿ ಕಡಿತದ ನಂತರ ಲಸಿಕೆಯನ್ನು ಸರಿಯಾಗಿ ತೆಗೆದುಕೊಳ್ಳುವುದರಿಂದ ಮನುಷ್ಯರಲ್ಲಿ ಈ ರೋಗವನ್ನು ಸಂಪೂರ್ಣವಾಗಿ ತಡೆಯಬಹುದು ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ. ಎಸ್.ಎಂ. ಹೊನಕೇರಿ ತಿಳಿಸಿದರು.

ವಿಶ್ವ ರೇಬಿಸ್ ದಿನಾಚರಣೆಯ ಪ್ರಯುಕ್ತ ಇಂದು (ಸೆ.29) ಧಾರವಾಡ ಪಶು ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಆರೋಗ್ಯಕ್ಕಾಗಿ ರೇಬಿಸ್ ನಿಯಂತ್ರಣ ಕುರಿತ ತಾಂತ್ರಿಕ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ರೋಗ ನಿಯಂತ್ರಣಕ್ಕಾಗಿ ಕಾರ್ಯಸಾಧಕ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಡಾ. ಹೊನಕೇರಿ ಕರೆ ನೀಡಿದರು.

ಒಂದು ತಿಂಗಳ ಉಚಿತ ಲಸಿಕೆ ಅಭಿಯಾನ

ಕಾರ್ಯಗಾರದ ಅದ್ಯಕ್ಷತೆ ವಹಿಸಿದ್ದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ ಮಾತನಾಡಿ, ಜಿಲ್ಲೆಯ ಎಲ್ಲಾ ಪಶು ವೈದ್ಯರು ಈಗಾಗಲೇ ಸೆಪ್ಟೆಂಬರ್ ತಿಂಗಳಾದ್ಯಂತ ಶಾಲಾ-ಕಾಲೇಜುಗಳಲ್ಲಿ ರೇಬೀಸ್ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.

ರೋಗದ ನಿಯಂತ್ರಣಕ್ಕಾಗಿ ಇಂದಿನಿಂದ ಒಂದು ತಿಂಗಳವರೆಗೆ ಜಿಲ್ಲೆಯ ಎಲ್ಲ ಸರ್ಕಾರಿ ಪಶು ಚಿಕಿತ್ಸಾಲಯಗಳಲ್ಲಿ ಸಾಕು ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳಿಗೆ ನಾಯಿ ಹುಚ್ಚು ರೋಗದ ವಿರುದ್ದ ಲಸಿಕೆಯನ್ನು ಉಚಿತವಾಗಿ ಹಾಕುವ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಘೋಷಿಸಿದರು. ಇದೇ ವೇಳೆ, ರೇಬಿಸ್ ರೋಗ ತಡೆಗಟ್ಟುವ ಮಾಹಿತಿಯ ಭಿತ್ತಿ ಪತ್ರಗಳನ್ನು ಅವರು ಬಿಡುಗಡೆಗೊಳಿಸಿದರು.

ಡಾ. ಸುನಿಲ್ ಕುಮಾರ ಕೆ.ಎಂ. ಅವರು ರೇಬಿಸ್ ರೋಗನಿರ್ಣಯ (ಡಯಗ್ನೋಸಿಸ್) ಮತ್ತು ರೋಗದ ನಿಯಂತ್ರಣದಲ್ಲಿ ಆದ ಹೊಸ ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ಕಾರ್ಯಗಾರದಲ್ಲಿ ತರಬೇತಿ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲ ಪಶುವೈದ್ಯರುಗಳಿಗೆ ಮತ್ತು ಸಿಬ್ಬಂದಿಗಳಿಗೆ ಸ್ಥಳದಲ್ಲಿಯೇ ರೇಬಿಸ್ ರೋಗ ನಿರೋಧಕ ಲಸಿಕೆಯನ್ನು ಹಾಕಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಎಲ್.ಪರಮೇಶ್ವರ ನಾಯಕ, ಉಪನಿರ್ದೆಶಕ ಡಾ.ಪ್ರಮೋದ ಮೂಡಲಗಿ, ಡಾ.ಆರ್.ಎ.ಪಾಟೀಲ, ಡಾ.ಎಮ್.ಎನ್.ಪಾಟೀಲ, ಪಶುವೈದ್ಯಕೀಯ ಅಧ್ಯಕ್ಷ ಡಾ.ಕೃಷ್ಣಪ್ಪ ರಾಥೋಡ ಸೇರಿದಂತೆ ಜಿಲ್ಲೆಯ ಎಲ್ಲಾ ಪಶುವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *