ಐಕ್ಯತೆ ಒಡೆಯಬಾರದು: ತಪ್ಪು ಮಾಡಿದವರನ್ನು ಸಮಾಜದ ಮುಖಂಡರೇ ತಿದ್ದಬೇಕು – ವೀರೇಂದ್ರ ಸ್ವಾಮೀಜಿ

Spread the love

ನವಲಗುಂದ: ಸಾರ್ವಜನಿಕ ಸ್ಥಳದಲ್ಲಿ ನಾವೆಲ್ಲರೂ ಐಕ್ಯತೆ ಮತ್ತು ಕೋಮುಸೌಹಾರ್ದತೆಯಿಂದ ಬಾಳಬೇಕು. ಯಾರು ಏನೇ ಮಾಡಿದರೂ ಈ ಐಕ್ಯತೆಯನ್ನು ಒಡೆಯಬಾರದು. ಸಮಾಜದಲ್ಲಿ ಯಾರಾದರೂ ತಪ್ಪು ಮಾಡಿದರೆ, ಅವರನ್ನು ಆಯಾ ಸಮಾಜದ ಮುಖಂಡರೇ ತಿದ್ದುವ ಕೆಲಸ ಮಾಡಬೇಕಿದೆ ಎಂದು ಅಜಾತ ನಾಗಲಿಂಗಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ ನುಡಿದರು.

​ಅವರು ಭಾನುವಾರ ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸೀರತ್ ಅಭಿಯಾನ 2025 ರ ಅಂಗವಾಗಿ ಆಯೋಜಿಸಿದ್ದ ಸೀರತ್ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಪ್ರವಾದಿ ಮಹಮದ್ ಪೈಗಂಬರ್‌ರವರ ಧಾರ್ಮಿಕ ಸೌಹಾರ್ದ ಹಾಗೂ ನೈತಿಕ ಮೌಲ್ಯಗಳನ್ನು ಉಳಿಸಿ ಮತ್ತು ಪಾಲಿಸಿ ಎಂದು ಅವರು ಕರೆ ನೀಡಿದರು.

​ಶಾಸಕ ಎನ್. ಎಚ್. ಕೋನರಡ್ಡಿ ಮಾತನಾಡಿ, “ಪ್ರವಾದಿ ಪೈಗಂಬರರು, ‘ಮತ್ತೊಬ್ಬರಿಗೆ ನೋವುಂಟು ಮಾಡದಂತೆ ಬದುಕಿ’ ಎಂಬ ಅತ್ಯಂತ ಸರಳ ಸಂದೇಶವನ್ನು ಸಾರಿದ್ದರು. ಅವರ ಈ ಆದರ್ಶಗಳು ಇಂದಿನ ದಿನಮಾನಗಳಿಗೂ ಪ್ರಸ್ತುತವಾಗಿವೆ” ಎಂದರು.

ಭಾರತಕ್ಕೆ ವೇದಾಂತದ ಮೆದುಳು, ಇಸ್ಲಾಂನ ದೇಹ ಬೇಕಿದೆ

​ಪ್ರವಚನಕಾರರಾದ, ರಾಜ್ಯ ಜಮಾಅತ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿಗಳಾದ ಮಹಮ್ಮದ್ ಕುಂಞ ಮಾತನಾಡಿ, “ಭಾರತಕ್ಕೆ ವೇದಾಂತದ ಮೆದುಳು, ಇಸ್ಲಾಂನ ದೇಹದ ಅಗತ್ಯವಿದೆ” ಎಂದು ಸ್ವಾಮಿ ವಿವೇಕಾನಂದರು ಹೇಳಿರುವುದು, ಪ್ರಸ್ತುತ ದಿನಗಳಲ್ಲಿ ದೇಶಕ್ಕೆ ಅತ್ಯಗತ್ಯ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಪ್ರವಾದಿಗಳ ಮತ್ತು ದಾರ್ಶನಿಕರ ನೈತಿಕ ಹಾಗೂ ಮಾನವೀಯ ಮೌಲ್ಯಗಳಲ್ಲಿ ಯಾರೂ ತಾರತಮ್ಯ ಮಾಡಬಾರದು. ಎಲ್ಲರಲ್ಲಿ ವಿಶ್ವಾಸವಿಟ್ಟು, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಹೃದಯವಂತಿಕೆ ನಮ್ಮಲ್ಲಿ ಬರಬೇಕು. ಉನ್ನತ ವಿಚಾರಗಳನ್ನು ಒಪ್ಪಿಕೊಂಡು ಪ್ರಜ್ಞೆಯೊಂದಿಗೆ ಒಗ್ಗೂಡಿ ಬಾಳಬೇಕು ಎಂದು ಅವರು ಹೇಳಿದರು.

​ಜಿಲ್ಲಾ ಜಮಾಅತ ಇಸ್ಲಾಮಿ ಹಿಂದ್‌ನ ಜಿಲ್ಲಾ ಸಂಚಾಲಕ ಅಬ್ದುಲಖಾದರ ಬೆಳಗಲಿ ಮಾತನಾಡಿ, ಪ್ರವಾದಿ ಮಹಮದ್ ಪೈಗಂಬರ್ ಅವರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು, ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಹಾಗೂ ವಿವಿಧ ಧರ್ಮೀಯರ ನಡುವಿನ ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು. ಇದೇ ವೇಳೆ ಸನ್ಮಾನ ಕಾರ್ಯಕ್ರಮವೂ ಜರುಗಿತು.

​ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಪಿಎಸ್‌ಐ ಜನಾರ್ಧನ್‌ ಬಿ, ಅಬ್ದುಲ‌ಖಾದರ ಕುನ್ನಿಭಾವಿ, ಅಲ್ಲಾಸಾಬ ಕಲ್ಲಕುಟ್ರಿ, ಮೋದಿನಸಾಬ ಶಿರೂರ, ದ್ಯಾಮಣ್ಣ ಹೋನಕುದರಿ, ದಾವಲಸಾಬ ಮಸೂತಿ, ಅಬ್ದುಲಖಾದರ ಗಚ್ಚಿ, ಅಣ್ಣಪ್ಪ ಬಾಗಿ, ರಾಯನಗೌಡ ಪಾಟೀಲ, ಅಬ್ಬಾಸ್ ದೇವರಿಡು, ರೀಯಾಜ ಪೀರಜಾದೆ, ಸಂಗಮೇಶ ಹಂಡಗಿ, ಎನ್. ಎನ್. ಡಂಬಳ, ಸೈಪುದ್ದೀನ ಅವಾರದಿ, ಮೈನುದ್ದೀನ ಧಾರವಾಡ, ಬಾಬುಸಾಬ ನದಾಫ್ ಮುಂತಾದವರು ಉಪಸ್ಥಿತರಿದ್ದರು.

(ಫೋಟೋ ಶೀರ್ಷಿಕೆ: ನವಲಗುಂದ ಸೀರತ್ ಪ್ರವಚನ ಕಾರ್ಯಕ್ರಮದಲ್ಲಿ ಶಾಸಕ ಎನ್. ಎಚ್. ಕೋನರಡ್ಡಿ ಅವರನ್ನು ಸನ್ಮಾನಿಸಲಾಯಿತು)

Leave a Reply

Your email address will not be published. Required fields are marked *