

ಬೆಳ್ತಂಗಡಿ: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನ್ಯಾಯಕ್ಕಾಗಿ ಹೋರಾಡುತ್ತಿರುವ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಅವರು, ತಮ್ಮ ಹಿಂದೆ “ಅನಾಮಿಕ ವ್ಯಕ್ತಿ” ಇದ್ದಾರೆಂಬ ಆರೋಪವನ್ನು ತಳ್ಳಿ ಹಾಕಿದ್ದಾರೆ. “ಯಾರೋ ಒಬ್ಬ ವ್ಯಕ್ತಿ ಹಿಂದೆ ಇಲ್ಲ, ನಮ್ಮಂತಹ ನೂರಾರು ಜನರು ಈ ಹೋರಾಟದ ಜೊತೆಗಿದ್ದಾರೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರವಿವಾರ ಪತ್ರಕರ್ತರೊಂದಿಗೆ ಜಂಟಿಯಾಗಿ ಮಾತನಾಡಿದ ಅವರು, ಈ ಹೋರಾಟಕ್ಕಾಗಿ ತಾವು ವಿದೇಶದಿಂದ ಹಣ ಪಡೆದಿದ್ದಾರೆ ಎಂಬ ಆರೋಪವನ್ನು ಬಲವಾಗಿ ನಿರಾಕರಿಸಿದರು. “ವಿದೇಶದಿಂದ ಹಣ ಬಂದಿದ್ದರೆ ಅದನ್ನು ಎಸ್‌ಐಟಿ, ಎನ್‌ಐಎ ಅಥವಾ ಯಾವುದೇ ತನಿಖಾ ಸಂಸ್ಥೆಯಿಂದ ಬೇಕಾದರೂ ತನಿಖೆ ಮಾಡಿಸಲಿ. ದುಡ್ಡು ಕೊಟ್ಟವರಿಗೆ ಮಾತ್ರ ಅದು ಬಂದಿರುವುದು ಗೊತ್ತಾಗುತ್ತದೆ. ಹಾಗಾಗಿ, ಆರೋಪ ಮಾಡುವವರೇ ನಮಗೆ ಹಣ ನೀಡಿದ್ದಾರೆಯೇ ಎಂದು ನಾವು ಪ್ರಶ್ನಿಸಬಹುದಲ್ಲವೇ?” ಎಂದು ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ತಿರುಗೇಟು ನೀಡಿದರು.
ಈವರೆಗೂ ಎಸ್‌ಐಟಿ ತಮ್ಮನ್ನು ತನಿಖೆಗೆ ಕರೆದಿಲ್ಲ ಎಂದು ತಿಳಿಸಿದ ಅವರು, “ಎಸ್‌ಐಟಿ ಯಾವುದೇ ಸಮಯದಲ್ಲಿ ಕರೆದರೂ ತನಿಖೆಗೆ ಹಾಜರಾಗಲು ನಾವು ಸಿದ್ಧರಿದ್ದೇವೆ” ಎಂದು ಹೇಳಿದರು. ಈ ಹೇಳಿಕೆಯು ಸೌಜನ್ಯ ಹೋರಾಟದ ಮುಂದಿನ ದಿಕ್ಕು ಹಾಗೂ ಅದರ ಸುತ್ತ ಕೇಳಿ ಬರುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದೆ.

