



ಅಣ್ಣಿಗೇರಿ: (ಧಾರವಾಡ) ಸ್ಥಳೀಯ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದ್ದ ಅಣ್ಣಿಗೇರಿ ಪುರಸಭೆಯ ವಿಶೇಷ ಸಾಮಾನ್ಯ ಸಭೆ, ಸೋಮವಾರ ಜನಪ್ರತಿನಿಧಿಗಳ ನಡುವಿನ ಭಿನ್ನಮತ ಮತ್ತು ಅಧಿಕಾರ ಹಂಚಿಕೆಯ ಕಿತ್ತಾಟದೊಂದಿಗೆ ಭಾರಿ ಗದ್ದಲಕ್ಕೆ ಕಾರಣವಾಯಿತು. ಶಾಸಕ ಎನ್.ಹೆಚ್.ಕೋನರಡ್ಡಿ ಅವರ ಸಮ್ಮುಖದಲ್ಲೇ ಕೆಲವು ಸದಸ್ಯರು ವಾಕ್ಸಮರ ನಡೆಸಿ ಸಭೆಯಿಂದ ಹೊರ ನಡೆದ ಪ್ರಸಂಗಗಳು ಜರುಗಿದವು.
ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 12ಕ್ಕೂ ಹೆಚ್ಚು ವಿಷಯಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ನೀಡಲಾಯಿತು. ಆದರೆ, ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯ ವಿಷಯ ಪ್ರಸ್ತಾಪವಾದಾಗ ಗದ್ದಲ ಶುರುವಾಯಿತು. ಕೆಲವು ಸದಸ್ಯರು ಅಧಿಕಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ನೇರವಾಗಿ ಶಾಸಕರ ವಿರುದ್ಧವೇ ಆಕ್ಷೇಪ ವ್ಯಕ್ತಪಡಿಸಿದರು. ಈ ಸಮಯದಲ್ಲಿ 6ನೇ ವಾರ್ಡಿನ ಮಹಿಳಾ ಸದಸ್ಯೆ ಬಸವಣ್ಣೆವ್ವಾ ದಿಡ್ಡಿ ಅವರು, “ಅಧಿಕಾರ ಹಂಚಿಕೆಯಲ್ಲಿ ನೀವು ನಮಗೆ ತಾರತಮ್ಯ ಮಾಡಿದ್ದೀರಿ” ಎಂದು ಶಾಸಕರಿಗೇ ನೇರವಾಗಿ ದೂರಿದರು.
ಉಪಾಧ್ಯಕ್ಷರ ಸಭಾತ್ಯಾಗ
ಪುರಸಭೆ ಉಪಾಧ್ಯಕ್ಷ ನಾಗರಾಜ ದಳವಾಯಿ ಅವರು, ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕದಲ್ಲಿ ತಾರತಮ್ಯ ಆಗುತ್ತಿದೆ ಎಂದು ದೂರಿದರು. ಶಾಸಕರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ದಳವಾಯಿ ಅವರು ಅಸಮಾಧಾನಗೊಂಡು ಕೆಲಕಾಲ ಸಭೆಯಿಂದ ಹೊರನಡೆದರು.
ಮಾಜಿ ಚೇರ್ಮನ್‌ರ ಬೇಸರ
ಇದಾದ ಬಳಿಕ, ಮಾಜಿ ಸ್ಥಾಯಿ ಸಮಿತಿ ಚೇರ್ಮನ್ ರೆಹಮಾನ್ ಸಾಬ್ ಹೊರಮನೆ ಅವರು ತಮ್ಮ ಬೇಸರವನ್ನು ಹೊರಹಾಕಿದರು. “ನಾನು ಅನಕ್ಷರಸ್ಥ ಎಂದು ನನ್ನನ್ನು ಕಡೆಗಣಿಸಲಾಯಿತು. ನನ್ನ ಅಧಿಕಾರ ಮುಗಿದ ಕೂಡಲೇ ಅಧಿಕಾರಿಗಳು ನನ್ನ ಕಚೇರಿಗೆ ಬೀಗ ಹಾಕಿದ್ದಾರೆ. ಈ ಹಿಂದಿನ ಚೇರ್ಮನ್‌ಗಳಿಗೂ ಹೀಗೆಯೇ ನಡೆದುಕೊಂಡಿದ್ದೀರಾ?” ಎಂದು ಶಾಸಕರ ಎದುರೇ ಪದೇಪದೇ ಡೆಸ್ಕ್ ಬಡಿದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಅವರು ಸಭೆಗೆ ಕೈ ಮುಗಿದು ಹೊರನಡೆದರು.
ಬಳಿಕ ಸದಸ್ಯ ಬಾಬಾಜಾನ್ ಮುಲ್ಲಾನವರ ಅವರು ಅವರನ್ನು ಸಮಾಧಾನಪಡಿಸಿ ಮತ್ತೆ ಸಭೆಗೆ ಕರೆತಂದರು.
ಶಾಸಕರಿಂದ ಸಮಜಾಯಿಷಿ
ಶಾಸಕ ಎನ್.ಹೆಚ್.ಕೋನರಡ್ಡಿ ಅವರು ಈ ಗದ್ದಲದ ಮಧ್ಯೆ ಮಾತನಾಡಿದರು. “ಎಲ್ಲವನ್ನೂ ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ. ಅಧಿಕಾರ ಹಂಚಿಕೆಯಲ್ಲಿ ಏರಿಳಿತ ಆಗುವುದು ಸಾಮಾನ್ಯ. ನಾವು ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು” ಎಂದು ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದರು.
ಇಷ್ಟೆಲ್ಲಾ ಗದ್ದಲಗಳ ನಡುವೆಯೂ ಶಾಸಕರು ಉಪಾಧ್ಯಕ್ಷರ ವಿರೋಧದ ಮಧ್ಯೆ ನಾಲ್ಕು ಜನ ಸ್ಥಾಯಿ ಸಮಿತಿ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸಿದರು. ಮುದಕಣ್ಣಾ ಕೊರವರ, ಇಮಾಮಸಾಬ್ ದರವಾನ, ನೀಲಪ್ಪಾ ಕುರಟ್ಟಿ, ಮತ್ತು ಅಬಿನಾಬೇಗಂ ಬಾರಿಗಿಡದ ಅವರನ್ನು ಸ್ಥಾಯಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಸಭೆಯಲ್ಲಿ ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ್ ಸೇರಿದಂತೆ ಹಲವು ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

