ಕೆಟಿಪಿಪಿ ಕಾಯ್ದೆ ಪಾಲನೆಯಿಂದ ಸರ್ಕಾರಿ ಖರೀದಿಯಲ್ಲಿ ಪಾರದರ್ಶಕತೆ ಸಾಧ್ಯ: ಸಿಇಓ ಭುವನೇಶ ಪಾಟೀಲ

Spread the love

ಧಾರವಾಡ, ಡಿ. 11: ಸರ್ಕಾರಿ ಇಲಾಖೆಗಳಲ್ಲಿ ನಡೆಯುವ ಕಾಮಗಾರಿಗಳು ಹಾಗೂ ಸಾಮಗ್ರಿಗಳ ಖರೀದಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ, ಸ್ಪರ್ಧಾತ್ಮಕತೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಕೆಟಿಪಿಪಿ ಕಾಯ್ದೆಯ ಬಗ್ಗೆ ಪೂರ್ಣ ಜ್ಞಾನ ಹೊಂದಿರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ತಿಳಿಸಿದರು.

​ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರದಂದು (ಡಿ. 10) ಆಯೋಜಿಸಲಾಗಿದ್ದ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ-1999’ (KTPP Act) ಮತ್ತು ನಿಯಮಗಳು-2000 ರ ಕುರಿತಾದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನೇಕ ಹಂತಗಳಲ್ಲಿ ಇಲಾಖೆಯ ಅಧಿಕಾರಿಗಳು ವಿವಿಧ ಖರೀದಿ ಮತ್ತು ಕಾಮಗಾರಿಗಳಿಗೆ ಆದೇಶ ನೀಡುವ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕಾಯ್ದೆಯ ನಿಯಮಗಳ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ತಿಳುವಳಿಕೆ ಇದ್ದಾಗ ಮಾತ್ರ ಪಾರದರ್ಶಕತೆ ಕಾಪಾಡಲು ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪ ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

​ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರವಾದ ಮಾಹಿತಿ ನೀಡಿದರು. ಟೆಂಡರ್ ಕರೆಯುವುದು, ಟೆಂಡರ್ ಸ್ವೀಕರಿಸಿ ವಿಶ್ಲೇಷಿಸುವುದು ಮತ್ತು ನಿಯಮಾನುಸಾರ ಗುತ್ತಿಗೆ ನೀಡುವುದು ಹೇಗೆ ಎಂಬ ಬಗ್ಗೆ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಕಾಯ್ದೆಯು ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಿ ಸ್ವಾಮ್ಯದ ನಿಗಮಗಳಿಗೆ ಅನ್ವಯಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

​ಇದೇ ಸಂದರ್ಭದಲ್ಲಿ, ಸರ್ಕಾರಿ ಖರೀದಿ ಪ್ರಕ್ರಿಯೆಗಳನ್ನು ಸುಗಮವಾಗಿ ನಡೆಸಲು ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್‌ಮೆಂಟ್ (KPP) ಪೋರ್ಟಲ್ ಬಳಸುವುದು ಕಡ್ಡಾಯವಾಗಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಇದು ಖರೀದಿ ಪ್ರಕ್ರಿಯೆಯನ್ನು ನ್ಯಾಯಯುತವಾಗಿ ನಡೆಸಲು ಇರುವ ಕಾನೂನಿನ ಚೌಕಟ್ಟಾಗಿದೆ ಎಂದು ತಿಳಿಸಲಾಯಿತು. ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಅಧೀನದ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *