
ಬೀದರ್: ಜಿಲ್ಲೆಯ ಔರಾದ್ ತಾಲ್ಲೂಕಿನ ಬೋರಾಳ ಗ್ರಾಮದ ಗೌತಮ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಕುರಿಗಾಹಿಯೊಬ್ಬರು ಹಾಗೂ 45 ಕುರಿಗಳು ಬೆಂಕಿಗಾಹುತಿಯಾಗಿರುವ ಮನಕಲಕುವ ಘಟನೆ ನಡೆದಿದೆ.
ಬೋರಾಳ ಗ್ರಾಮದ ಶಂಕರ್ ಈರಪ್ಪ ಮೇತ್ರೆ (65) ಮೃತಪಟ್ಟ ದುರ್ದೈವಿ ಕುರಿಗಾಹಿ. ಮಂಗಳವಾರ ರಾತ್ರಿ ವೇಳೆ ಕುರಿಗಳ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಹೊರಗೆ ಮಲಗಿದ್ದ ಶಂಕರ್ ಅವರು ಒಳಗೆ ಏನಾಗುತ್ತಿದೆ ಎಂದು ನೋಡಲು ಹೋದಾಗ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ. ಶರೀರದ ಶೇ. 90 ರಷ್ಟು ಭಾಗ ಸುಟ್ಟು ಹೋಗಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 30 ಕುರಿಗಳು ಹಾಗೂ 15 ಮರಿಗಳು ಬೆಂಕಿಯಲ್ಲಿ ಬೆಂದು ಕರಕಲಾಗಿವೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಬೆಂಕಿಯ ತೀವ್ರತೆಗೆ ಕೊಟ್ಟಿಗೆಯಲ್ಲಿದ್ದ ಕುರಿಗಳಷ್ಟೇ ಅಲ್ಲದೆ, ಸಂಗ್ರಹಿಸಿಟ್ಟಿದ್ದ ಜೋಳ, ಗೋಧಿ ಹಾಗೂ ಹತ್ತಿ ಸೇರಿದಂತೆ ಸುಮಾರು 26 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ಮಹೇಶ ಪಾಟೀಲ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಸಿಪಿಐ ರಘುವೀರಸಿಂಗ್ ಠಾಕೂರ್, ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ ಪಾಟೀಲ ಹಾಗೂ ಪಿಎಸ್‌ಐ ವಾಸೀಂ ಪಟೀಲ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದ್ದರೂ, ಪೂರ್ಣ ಪ್ರಮಾಣದ ತನಿಖೆಯ ನಂತರವೇ ನಿಖರ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.

