
ಕುಕನೂರ (ಕೊಪ್ಪಳ ಜಿಲ್ಲೆ) ಜೀವನ ನಿರ್ವಹಣೆಯ ಸಮಸ್ಯೆಗಳು ಅಥವಾ ಕೌಟುಂಬಿಕ ಕಾರಣಗಳಿಂದ ಮನನೊಂದ ಮಹಿಳೆಯೊಬ್ಬರು ತಮ್ಮಿಬ್ಬರು ಪುಟ್ಟ ಮಕ್ಕಳೊಂದಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅತೀ ದುರಂತ ಘಟನೆ ತಾಲ್ಲೂಕಿನ ಬೆಣಕಲ್ ಗ್ರಾಮದಲ್ಲಿ ಸೋಮವಾರ ನಡೆದಿದೆ. ಈ ಕರುಣಾಜನಕ ಘಟನೆ ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ಸೃಷ್ಟಿಸಿದೆ.
ಮಕ್ಕಳಿಗೆ ನೇಣು ಹಾಕಿ ತಾಯಿ ಆತ್ಮಹತ್ಯೆ:
ಮೃತ ದುರ್ದೈವಿಗಳನ್ನು ಲಕ್ಷ್ಮವ್ವ ಭಜಂತ್ರಿ (30), ಆಕೆಯ ಪುತ್ರ ರಮೇಶ್ (4) ಮತ್ತು ಪುತ್ರಿ ಜಾಹ್ನವಿ (2) ಎಂದು ಗುರುತಿಸಲಾಗಿದೆ. ಲಕ್ಷ್ಮವ್ವ ಅವರು ತಮ್ಮ ತವರುಮನೆ ಬೆಣಕಲ್ನಲ್ಲಿ ವಾಸವಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊದಲು ಇಬ್ಬರು ಮಕ್ಕಳನ್ನು ನೇಣಿಗೆ ಹಾಕಿ ಹತ್ಯೆ ಮಾಡಿ, ನಂತರ ತಾವು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ತನಿಖೆಗೆ ಎಸ್ಪಿ ಭೇಟಿ:
ಸುದ್ದಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರು ಬೆಣಕಲ್ ಗ್ರಾಮಕ್ಕೆ ಭೇಟಿ ನೀಡಿ, ಘಟನಾ ಸ್ಥಳವನ್ನು ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, “ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಲಕ್ಷ್ಮವ್ವಳ ಗಂಡ ಹನುಮಪ್ಪ ಹಾಗೂ ತಾಯಿ ಕೆಲಸಕ್ಕೆ ಹೋಗಿದ್ದರು. ಸದ್ಯಕ್ಕೆ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರೆದಿದೆ,” ಎಂದು ತಿಳಿಸಿದರು.
ಕುಟುಂಬ ಕಲಹದ ಶಂಕೆ:
ಸುಮಾರು ಒಂಬತ್ತು ವರ್ಷಗಳ ಹಿಂದೆ ಕೊಪ್ಪಳ ತಾಲ್ಲೂಕಿನ ಕಕ್ಕಿಹಳ್ಳಿ ಗ್ರಾಮದ ಹನುಮಪ್ಪ ಎಂಬುವವರೊಂದಿಗೆ ಲಕ್ಷ್ಮವ್ವಳ ವಿವಾಹವಾಗಿತ್ತು. ಆದಾಗ್ಯೂ, ಲಕ್ಷ್ಮವ್ವ ತನ್ನ ತವರು ಮನೆಯಲ್ಲಿಯೇ ವಾಸವಿದ್ದರು. ಗಂಡ-ಹೆಂಡತಿ ನಡುವಿನ ವೈಮನಸ್ಸು ಅಥವಾ ಜೀವನ ನಿರ್ವಹಣೆಯ ಸಮಸ್ಯೆಯೇ ಈ ದಾರುಣ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.
ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಮೃತರ ಪತಿ ಹನುಮಪ್ಪ ಮತ್ತು ಕುಟುಂಬದವರ ವಿಚಾರಣೆ ನಡೆಸಿ ಆತ್ಮಹತ್ಯೆಗೆ ಕಾರಣವಾದ ಅಂಶಗಳನ್ನು ತಿಳಿದುಕೊಳ್ಳಲು ಮುಂದಾಗಿದ್ದಾರೆ.

