ಹಣಕ್ಕಾಗಿ ಮಗು ಕಳೆದುಕೊಂಡ ತಂದೆ: ನವಜಾತ ಶಿಶುವನ್ನು ಚೀಲದಲ್ಲಿ ಹೊತ್ತು ಡಿಸಿ ಕಚೇರಿಗೆ ಬಂದ ದುರ್ಬಲಿ

Spread the love

ಉತ್ತರ ಪ್ರದೇಶ: ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಾಗ ಮೊದಲು ಹಣ ಪಾವತಿಸಿ ಎಂದು ಹೇಳುವ ವೈದ್ಯರು, ಆಡಳಿತ ವರ್ಗ ಎಷ್ಟೊಂದು ಹೃದಯಹೀನವಾಗಿರಬಹುದು ಎಂಬುದಕ್ಕೆ ಇದೊಂದು ಜೀವಂತ ಸಾಕ್ಷಿ. ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಮತ್ತು ಹಣದ ಹಪಾಹಪಿಯಿಂದಾಗಿ ತನ್ನ ನವಜಾತ ಶಿಶು ಕೊನೆಯುಸಿರೆಳೆದಿರುವ ಹೃದಯ ವಿದ್ರಾವಕ ಘಟನೆಯೊಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದೆ. ದುಃಖದಿಂದ ಕಂಗೆಟ್ಟ ತಂದೆಯೊಬ್ಬ ತನ್ನ ಮೃತ ಮಗುವನ್ನು ಚೀಲದಲ್ಲಿ ಹೊತ್ತು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದು, ಈ ಅಮಾನವೀಯ ವ್ಯವಸ್ಥೆಯ ವಿರುದ್ಧ ತನ್ನ ಆಕ್ರೋಶ ಹೊರಹಾಕಿದ್ದಾರೆ.

ಘಟನೆ ವಿವರ:
ಲಖಿಂಪುರ ಖೇರಿಯ ನಿವಾಸಿ ವಿಪಿನ್ ಗುಪ್ತಾ ಅವರ ಪತ್ನಿ ಆಗಸ್ಟ್‌ 21ರ ರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ವಿಪಿನ್ ಕೂಡಲೇ ತಮ್ಮ ಪತ್ನಿಯನ್ನು ಇಲ್ಲಿನ ಗೋಲ್ಡರ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಮಾನವೀಯತೆ ಮರೆತ ವೈದ್ಯರು ಮೊದಲು ಹಣ ಪಾವತಿಸಿದರೆ ಮಾತ್ರ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ. ವಿಪಿನ್ ಹೇಗೋ ಸ್ವಲ್ಪ ಹಣ ಹೊಂದಿಸಿ ಶುಲ್ಕ ಪಾವತಿಸಿದ್ದಾರೆ.
ಇದಾದ ಬಳಿಕ, ವೈದ್ಯರು ಮತ್ತೆ ಹೆಚ್ಚಿನ ಶುಲ್ಕಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ನಿರ್ದಿಷ್ಟ ಹಣವನ್ನು ಒಮ್ಮೆಲೇ ಹೊಂದಿಸುವುದು ಕಷ್ಟವಾದ್ದರಿಂದ, ವಿಪಿನ್ ಗುಪ್ತಾ ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಹಣವನ್ನು ಪಾವತಿ ಮಾಡಿದ್ದಾರೆ. ಆದರೆ, ದುರದೃಷ್ಟವಶಾತ್, ಅಷ್ಟೊತ್ತಿಗಾಗಲೇ ಸಮಯ ಮೀರಿತ್ತು. ವೈದ್ಯರು ಹೆರಿಗೆ ಮಾಡಿಸಿದಾಗ ಮಗು ಮೃತಪಟ್ಟಿತ್ತು. ಇದು ಸರಕಾರಿ ಆಸ್ಪತ್ರೆಯಲ್ಲಿನ ಅಮಾನವೀಯ ನಡವಳಿಕೆ ಮತ್ತು ಕರ್ತವ್ಯ ಲೋಪದ ಪರಾಕಾಷ್ಠೆ.
ಜಿಲ್ಲಾಧಿಕಾರಿ ಕಚೇರಿಗೆ ನವಜಾತ

ಶಿಶುವಿನ ಶವ:
ವೈದ್ಯರ ನಿರ್ಲಕ್ಷದಿಂದಾಗಿ ತಮ್ಮ ಮಗು ಮೃತಪಟ್ಟಿದ್ದಕ್ಕೆ ತೀವ್ರ ಸಿಟ್ಟಿಗೆದ್ದ ವಿಪಿನ್, ಮೃತ ನವಜಾತ ಶಿಶುವನ್ನು ಒಂದು ಚೀಲದಲ್ಲಿ ಹಾಕಿ ಆಗಸ್ಟ್‌ 22ರಂದು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದಾರೆ. ಅಲ್ಲಿ ಅಧಿಕಾರಿಗಳಿಗೆ ಗೋಲ್ಡರ್ ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಅವರ ನೋವು ಮತ್ತು ಆಕ್ರೋಶಕ್ಕೆ ಕರಗಿಹೋದ ಅಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ.

ಗೋಲ್ಡರ್ ಆಸ್ಪತ್ರೆಗೆ ಬೀಗ:
ಸರಕಾರಿ ಆಸ್ಪತ್ರೆಯಲ್ಲಿ ನಡೆದ ವೈದ್ಯರ ನಿರ್ಲಕ್ಷ್ಯದ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಕೂಡಲೇ ಗೋಲ್ಡರ್ ಆಸ್ಪತ್ರೆಗೆ ಬೀಗ ಜಡಿಯುವಂತೆ ಆದೇಶ ಹೊರಡಿಸಿದ್ದಾರೆ. ಅದರಂತೆ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ, ಅಲ್ಲಿನ ರೋಗಿಗಳನ್ನು ಪಕ್ಕದ ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಿ, ಆಸ್ಪತ್ರೆಗೆ ಬೀಗ ಜಡಿದಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸೂಚಿಸಿದ್ದಾರೆ.
ವಿಪಿನ್ ಗುಪ್ತಾ ಅವರ ಪತ್ನಿಯನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದ್ದು, ಕುಟುಂಬದ ಜೊತೆ ಜಿಲ್ಲಾಡಳಿತ ಇರುವುದಾಗಿ ಭರವಸೆ ನೀಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುವ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಆಡಳಿತ ವ್ಯವಸ್ಥೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *