ಗಾಜಿಯಾಬಾದ್: ಬೀದಿ ನಾಯಿ ರಕ್ಷಿಸಲು ಹೋಗಿ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸಾವು

Spread the love

ಗಾಜಿಯಾಬಾದ್: ರಸ್ತೆಗೆ ಅಡ್ಡ ಬಂದ ಬೀದಿ ನಾಯಿಯನ್ನು ರಕ್ಷಿಸಲು ಹೋಗಿ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಒಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದುರ್ಘಟನೆ ಸೋಮವಾರ (ಆಗಸ್ಟ್ 18) ಗಾಜಿಯಾಬಾದ್‌ನಲ್ಲಿ ನಡೆದಿದೆ.

ಮೃತರನ್ನು ರಿಚಾ ಸಚನ್ (25) ಎಂದು ಗುರುತಿಸಲಾಗಿದೆ. ರಿಚಾ ಅವರು 2023ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದರು ಮತ್ತು ಗಾಜಿಯಾಬಾದ್‌ನ ಶಾಸ್ತ್ರಿ ನಗರ ಹೊರಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಘಟನೆಯ ವಿವರ:
ಸೋಮವಾರ ಮಧ್ಯಾಹ್ನ ರಿಚಾ ಅವರು ಕರ್ತವ್ಯ ಮುಗಿಸಿ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ, ಏಕಾಏಕಿ ಬೀದಿ ನಾಯಿಯೊಂದು ರಸ್ತೆಗೆ ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ರಿಚಾ ತಕ್ಷಣವೇ ಬ್ರೇಕ್ ಹಾಕಿದ್ದಾರೆ. ಇದರಿಂದಾಗಿ ವಾಹನ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ. ಅದೇ ಸಮಯದಲ್ಲಿ ವೇಗವಾಗಿ ಬಂದ ಕಾರೊಂದು ರಿಚಾ ಅವರಿಗೆ ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡಿದ್ದ ರಿಚಾ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಕುಟುಂಬಸ್ಥರ ಆಕ್ರಂದನ:
ಕಾಸ್ಪುರ ನಿವಾಸಿಯಾಗಿರುವ ರಿಚಾ ಅವರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮುಂದಿನ ವರ್ಷ ಮಗಳಿಗೆ ಮದುವೆ ಮಾಡುವ ಆಲೋಚನೆಯಲ್ಲಿ ಇದ್ದೆವು, ಆದರೆ ಅದೆಲ್ಲವೂ ನುಚ್ಚುನೂರಾಯಿತು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಕರ್ತವ್ಯದ ಜೊತೆಗೆ ಯುಪಿಎಸ್‌ಸಿ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದ ರಿಚಾ ಅವರ ಸಾವಿಗೆ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *