“ಬ್ರೇಕ್‌ಫಾಸ್ಟ್ ಶೃಂಗಸಭೆ ಕದನ ವಿರಾಮವಷ್ಟೇ”: ಸಿಎಂ-ಡಿಸಿಎಂ ಸಭೆ ಕುರಿತು ಆರ್. ಅಶೋಕ ತೀವ್ರ ವಾಗ್ದಾಳಿ

Spread the love

ಬೆಂಗಳೂರ:ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವಿನ ಬಹು ನಿರೀಕ್ಷಿತ ‘ಬೆಳಗಿನ ಉಪಾಹಾರ ಶೃಂಗಸಭೆ’ಯ ಕುರಿತು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಶೋಕ ಅವರ ಪ್ರಕಾರ, ಈ ಸಭೆಯನ್ನು “ಬ್ರೇಕ್‌ಫಾಸ್ಟ್ ಮೀಟಿಂಗ್” ಎಂದು ಕರೆಯುವುದು ಕೇವಲ ಔದಾರ್ಯ. ನಿಜ ಹೇಳಬೇಕೆಂದರೆ, ಇದು ದಿನಬೆಳಗಾದರೆ ಒಬ್ಬರ ಮೇಲೊಬ್ಬರು ಹೊಂಚು ಹಾಕಿ, ಕತ್ತಿ ಮಸಿಯುವ ಯುದ್ಧ ನಿರತ ಎರಡು ಬಣಗಳ ಕಮಾಂಡರ್‌ಗಳ ನಡುವಿನ “ಕದನ ವಿರಾಮ” ಸಭೆಯಂತೆ ಕಾಣಿಸಿತು ಎಂದು ಅವರು ವ್ಯಂಗ್ಯವಾಡಿದ್ದಾರೆ.

​ಎಲ್ಲಕ್ಕಿಂತಲೂ ಹಾಸ್ಯಾಸ್ಪದ ಸಂಗತಿ ಏನೆಂದರೆ, ಇಬ್ಬರೂ ನಾಯಕರು ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಎಲ್ಲಾ ಗೊಂದಲಗಳಿಗೆ ಮಾಧ್ಯಮಗಳನ್ನೇ ದೂಷಿಸುತ್ತಿರುವುದು ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗೊಂದಲಗಳನ್ನು ಸೃಷ್ಟಿಸಿದ್ದು ಮಾಧ್ಯಮಗಳೋ ಅಥವಾ ಆಡಳಿತಾರೂಢ ನಾಯಕರೋ ಎಂಬ ನೇರ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.

ಮಾಧ್ಯಮಗಳಲ್ಲ, ನಾಯಕರೇ ಗೊಂದಲಗಳಿಗೆ ಕಾರಣ:

​ಅವರು ಸರಣಿ ಪ್ರಶ್ನೆಗಳನ್ನು ಮುಂದಿಡುವ ಮೂಲಕ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು. “ನವೆಂಬರ್‌ನಲ್ಲಿ ‘ಕ್ರಾಂತಿ’ ಎಂದು ಕರೆ ನೀಡಿ, ಹೇಳಿಕೆಗಳ ಮೇಲೆ ಹೇಳಿಕೆ ಕೊಟ್ಟು, ಪಕ್ಷದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದ್ದು ಪತ್ರಕರ್ತರಾ? ‘ಕೊಟ್ಟ ಮಾತು ಉಳಿಸಿಕೊಳ್ಳವವನು ನಿಜವಾದ ನಾಯಕ,’ ‘ಐದಾರು ಜನರ ಮಧ್ಯೆ ನಡೆದಿರುವ ವ್ಯಾಪಾರ,’ ‘ಐದು ವರ್ಷ ನಾನೇ ಸಿಎಂ’ ಎಂದೆಲ್ಲಾ ಬಹಿರಂಗ ಹೇಳಿಕೆಗಳ ಮೂಲಕ ಬಿಕ್ಕಟ್ಟು ಸೃಷ್ಟಿಸಿದ್ದು ಪತ್ರಕರ್ತರಾ? ಶಕ್ತಿ ಪ್ರದರ್ಶನಕ್ಕೆಂದು ಶಾಸಕರ ಗುಂಪುಗಳನ್ನು ಕಟ್ಟಿಕೊಂಡು ತಂಡ ತಂಡವಾಗಿ ದೆಹಲಿಗೆ ಹೋಗಿ, ಗುಪ್ತ ಸಭೆಗಳನ್ನು ನಡೆಸಿದ್ದು ಪತ್ರಕರ್ತರಾ?” ಎಂದು ಅವರು ಪ್ರಶ್ನಿಸಿದ್ದಾರೆ.

​ಇಂದು ರಾಜ್ಯದಲ್ಲಿ ಸೃಷ್ಟಿಯಾಗಿರುವ ಈ ಎಲ್ಲಾ ಗೊಂದಲಗಳಿಗೆ ಕಾರಣವೇನು ಗೊತ್ತೇ? ತಮ್ಮಿಬ್ಬರ ಒಣಪ್ರತಿಷ್ಠೆ, ಅಧಿಕಾರದ ಲಾಲಸೆ ಮತ್ತು ಶಾಸಕರ ಗುಂಪುಗಾರಿಕೆಯೇ ಕಾರಣವೇ ಹೊರತು, ಅವರ ನಾಟಕಗಳನ್ನು ವರದಿ ಮಾಡಿ ಸತ್ಯವನ್ನು ಬಿತ್ತರಿಸಿದ ಮಾಧ್ಯಮಗಳಲ್ಲ ಎಂದು ಆರ್. ಅಶೋಕ ಖಡಾಖಂಡಿತವಾಗಿ ಹೇಳಿದ್ದಾರೆ.

​ಈ ತೋರಿಕೆಯ “ಏಕತೆಯ ಪ್ರದರ್ಶನ”ದ ಹಿಂದೆ ಎಲ್ಲರಿಗೂ ಸ್ಪಷ್ಟವಾಗಿ ಕಾಣುತ್ತಿರುವುದು ಬಿಡಿಸಲಾಗದ ಕಗ್ಗಂಟು ಮತ್ತು ಸಂಪೂರ್ಣವಾಗಿ ಒಡೆದ ಕನ್ನಡಿಯ ಚೂರುಗಳೇ ಹೊರತು, ಯಾವುದೇ ಪ್ರಾಮಾಣಿಕ ಮೈತ್ರಿಯಲ್ಲ. ಇದು ಕೇವಲ ಒಂದು ಕ್ಷಣಿಕ ‘ಆಪ್ಟಿಕ್ಸ್’ ಅಷ್ಟೇ ಎನ್ನುವುದು ಮಾತ್ರ ಗ್ಯಾರಂಟಿ ಎಂದು ಅಶೋಕ ಅವರು ತಮ್ಮ ಹೇಳಿಕೆಯನ್ನು ಮುಕ್ತಾಯಗೊಳಿಸಿದರು

Leave a Reply

Your email address will not be published. Required fields are marked *