
ನವಲಗುಂದ: ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ಮತಾಂತರದ ವಿರುದ್ಧ ಹೋರಾಡಲು ಸಾಮಾನ್ಯ ಜನರನ್ನು ಸಂಘಟಿಸಿ, ಅವರನ್ನು ಬಲಿಷ್ಠ ಸೈನಿಕರನ್ನಾಗಿ ಪರಿವರ್ತಿಸುವ ಮೂಲಕ 1674ರಲ್ಲಿ ‘ಹಿಂದೂ ಸ್ವರಾಜ್ಯ’ವನ್ನು ಸ್ಥಾಪಿಸಿದರು. ಇಡೀ ಹಿಂದೂ ಧರ್ಮವನ್ನು ಒಗ್ಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಆರ್‌ಎಸ್‌ಎಸ್ ಮುಖಂಡ ವಿನಾಯಕ ಕೆಲಗೇರಿ ಹೇಳಿದರು.
ತಾಲೂಕಿನ ಮೊರಬ, ತಲೆಮೊರಬ, ಗುಮ್ಮಗೋಳ, ಶಿರೂರ ಹಾಗೂ ಆಯಟ್ಟಿ ಗ್ರಾಮಗಳ ಸಂಯೋಗದಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ಜನ ಜಾಗೃತಿ ಮಹಾ ಸಮಾವೇಶ’ದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು. ಜಗತ್ತಿನ ನೂರಾರು ರಾಷ್ಟ್ರಗಳಿಗೆ ಉಗಮದ ಇತಿಹಾಸವಿದೆ, ಆದರೆ ಭಾರತವು ದೈವಸೃಷ್ಟಿಯ ರಾಷ್ಟ್ರವಾಗಿರುವುದರಿಂದ ಇದಕ್ಕೆ ಹುಟ್ಟು ಎಂಬುದು ಗೊತ್ತಿಲ್ಲ. ಎಲ್ಲಿ ಮಹಿಳೆಯರನ್ನು ಗೌರವಿಸಿ ಪೂಜಿಸಲಾಗುತ್ತದೆಯೋ ಅಲ್ಲಿ ದೈವತ್ವ ನೆಲೆಸಿರುತ್ತದೆ. ಇಂತಹ ಶ್ರೇಷ್ಠ ಪರಂಪರೆಯುಳ್ಳ ಹಿಂದೂ ಧರ್ಮವನ್ನು ಸಾಕ್ಷಾತ್ ದೇವರೇ ಸೃಷ್ಟಿಸಿದ್ದಾನೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಡಿವಾಳಪ್ಪ ಸಂಕದ ಅವರು ಮಾತನಾಡಿ, ಹಿಂದೂ ಧರ್ಮವು ಕೇವಲ ಒಂದು ಮತವಲ್ಲ, ಅದು ಒಂದು ಶ್ರೇಷ್ಠ ಜೀವನ ಶೈಲಿಯಾಗಿದೆ. ಪರಧರ್ಮ ಸಹಿಷ್ಣುತೆ, ಸತ್ಯ, ಅಹಿಂಸೆ ಹಾಗೂ ಸಹಬಾಳ್ವೆಯನ್ನು ಜಗತ್ತಿಗೆ ಕಲಿಸಿದ ಕೀರ್ತಿ ನಮ್ಮ ಪರಂಪರೆಗೆ ಸಲ್ಲುತ್ತದೆ. ಇಡೀ ಜಗತ್ತನ್ನೇ ಒಂದು ಕುಟುಂಬವೆಂದು ಭಾವಿಸುವ ‘ವಸುದೈವ ಕುಟುಂಬಕಂ’ ಎಂಬ ಉದಾತ್ತ ಗುಣ ನಮ್ಮ ಧರ್ಮದ ಜೀವಾಳವಾಗಿದೆ ಎಂದು ತಿಳಿಸಿದರು.
ಜಡಿಮಠದ ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾವೇಶದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಶೋಭಾಯಾತ್ರೆ ಜರುಗಿತು. ವಿವಿಧ ಗ್ರಾಮಗಳ ಕಲಾತಂಡಗಳು, ಪೂರ್ಣಕುಂಭ ಹೊತ್ತ ಮಹಿಳೆಯರು, ಅಲಂಕೃತ ಚಕ್ಕಡಿ ಮೆರವಣಿಗೆ ಹಾಗೂ ವಿವಿಧ ವೇಷಭೂಷಣ ತೊಟ್ಟ ಮಕ್ಕಳ ನಡಿಗೆಯು ಪೇಟೆಯ ಬಯಲಿನಲ್ಲಿ ನಡೆದ ಸಮಾವೇಶಕ್ಕೆ ಮೆರುಗು ನೀಡಿತು.
ವೇದಿಕೆಯ ಮೇಲೆ ಪ್ರಮುಖ ಮುಖಂಡರಾದ ಗಂಗಪ್ಪ ಮನಮಿ, ಕುಮಾರ ಪಾಟೀಲ, ಶಂಕರಗೌಡ ಬಾಳನಗೌಡ್ರ, ಚಂದ್ರು ಗುಳಮನಿ, ರುದ್ರಪ್ಪ ಕೆರಿಮನಿ, ಪ್ರಕಾಶ ಮಾನಶೆಟ್ರ, ಬಾಳಪ್ಪ ಮಂಟೂರ, ಷಣ್ಮುಖ ಇಂಡಿ ಹಾಗೂ ಮಂಜು ಕಾಲವಾಡ ಉಪಸ್ಥಿತರಿದ್ದರು. ವಿ.ಪಿ. ಜಾಕೋಜಿ ಸ್ವಾಗತಿಸಿದರು, ಯೋಗಪ್ಪ ಧಾರವಾಡ ಕಾರ್ಯಕ್ರಮ ನಿರೂಪಿಸಿದರು ಮತ್ತು ಸಿದ್ದು ಮುಗಣ್ಣವರ ವಂದಿಸಿದರು.

