

ಧಾರವಾಡ: ಯುವಜನತೆಯಲ್ಲಿ ಅಡಗಿರುವ ಅಪಾರ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡು ಉನ್ನತ ಸಾಧನೆ ಮಾಡಿದರೆ ಅದು ತಂದೆ-ತಾಯಿ, ಗುರು, ಸಮಾಜ ಹಾಗೂ ದೇಶದ ಋಣ ತೀರಿಸಿದಂತೆ ಎಂದು ಧಾರವಾಡ ಐಐಟಿ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಡಾ. ಎಸ್.ಎಂ.ಶಿವಪ್ರಸಾದ್ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಭವನದಲ್ಲಿ ಮಂಗಳವಾರ ನಡೆದ ಯುವಜನ ಮತ್ತು ಕ್ರೀಡಾ ಮಂಟಪದ ಪ್ರಸಕ್ತ ತ್ರೈವಾರ್ಷಿಕ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಯೌವನವು ಮನುಷ್ಯನ ಜೀವನದ ಸುಂದರ ಭಾಗವಾಗಿದೆ. ಯುವಕರು ದುಶ್ಚಟಗಳಿಂದ ದೂರವಿದ್ದು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಮತ್ತೊಬ್ಬರಿಗೆ ಮಾದರಿಯಾಗುವಂತೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕ್ರೀಡೆಗಳು ಬದುಕಿಗೆ ಉಲ್ಲಾಸ ಮತ್ತು ಉತ್ಸಾಹ ತುಂಬುತ್ತವೆ. ಹೀಗಾಗಿ ಸೋಲು-ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಸ್ಪರ್ಧಾ ಮನೋಭಾವವು ಉತ್ತಮ ಕ್ರೀಡಾಪಟುವಿನ ಲಕ್ಷಣ. ಉನ್ನತ ಗುರಿಯೊಂದಿಗೆ ಸಾಧನೆಯ ಹಾದಿಯಲ್ಲಿ ಸಾಗಿದರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.


ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಯುವಜನತೆ ಈ ದೇಶದ ಆಸ್ತಿ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಯುವಕರು ತಮ್ಮ ಜವಾಬ್ದಾರಿಯನ್ನು ಅರಿತು ಎಚ್ಚರಿಕೆಯ ಹೆಜ್ಜೆ ಇಡಬೇಕು. ವಿದ್ಯಾರ್ಥಿಗಳು ಸಮಯ, ಶ್ರಮ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಒತ್ತು ನೀಡಬೇಕು. ದೊಡ್ಡ ಕನಸುಗಳನ್ನು ಕಂಡು ಅದನ್ನು ನನಸು ಮಾಡಿಕೊಳ್ಳುವ ಕಡೆಗೆ ಗಮನ ಹರಿಸಬೇಕು. ತಂದೆ-ತಾಯಿ, ಗುರು ಹಾಗೂ ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿ ಮತ್ತು ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬಳಿಕ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು
ಕಾರ್ಯಕ್ರಮದಲ್ಲಿ ಪ್ರೇಮಾ ಬೂದಿಹಾಳ ಮಲ್ಲಕಂಬ ಪ್ರದರ್ಶಿಸಿದರು. ಕೆ.ಇ. ಬೋರ್ಡ್ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಹಾಗೂ ಜಿಗಳೂರು ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆ ಹಾಡಿದರು. ಸರಕಾರಿ ಪದವಿ ಪೂರ್ವ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಸಮೂಹಗಾನ ಹಾಗೂ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ನೀಡಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮಕ್ಕೆ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಸಂತ ಮುರ್ಡೇಶ್ವರ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಂಟಪದ ಸಲಹಾ ಸಮಿತಿ ಸದಸ್ಯೆ ವೀಣಾ ಹೊಸಮನಿ ಸ್ವಾಗತಿಸಿದರು. ಡಾ. ವಿಜಯಶ್ರೀ ಅಂಗಡಿ ಪ್ರಾರ್ಥಿಸಿದರು. ಯುವಜನ ಮತ್ತು ಕ್ರೀಡಾ ಮಂಟಪದ ಸಂಚಾಲಕಿ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಡಾ. ಬಾಬು ಬೆಣ್ಣಿ ವಂದಿಸಿದರು.
ಈ ಸಂದರ್ಭದಲ್ಲಿ ಸತೀಶ ತುರಮರಿ, ಡಾ. ಜಿನದತ್ತ ಹಡಗಲಿ, ಡಾ. ಶೈಲಜಾ ತ. ಅಮರಶೆಟ್ಟಿ, ಡಾ. ಸುರೇಶ ಹೊರಕೇರಿ, ಸಿಪಿಐ ನಾಗಯ್ಯ ಕಾಡದೇವರ, ಪತ್ರಕರ್ತ ಲಿಂಗರಾಜ ಪಾಟೀಲ, ಡಾ. ಬಾಬು ಬೆಣ್ಣಿ, ಶಿವನಯ್ಯ ಹಿರೇಮಠ, ದೀಪಕ ಬಾಣದ, ಡಾ. ಪ್ರಭಾ ನೀರಲಗಿ, ನೀಲಾ ಶಿಗ್ಲಿ, ಶಿವಲೀಲಾ, ಆಶಾ ಸಯ್ಯದ್, ನಂದಾ ಗುಳೇದಗುಡ್ಡ, ಬಸವರಾಜ ಮುರಗೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

