
ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 7 ರನ್ಗಳ ರೋಚಕ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಸಂಜು ಸ್ಯಾಮ್ಸನ್ ಅವರ ಆಕರ್ಷಕ ಬ್ಯಾಟಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದ್ದು, ಇದೀಗ ಪ್ರಶಸ್ತಿಗಾಗಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋಯಿತು. ಆರಂಭಿಕ ಆಟಗಾರ ಇಶಾನ್ ಕಿಶನ್ ಕೇವಲ 18 ಎಸೆತಗಳಲ್ಲಿ 39 ರನ್ ಸಿಡಿಸಿ ಭದ್ರ ಬುನಾದಿ ಹಾಕಿಕೊಟ್ಟರೆ, ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಅಬ್ಬರಿಸಿದರು. ಇಂಗ್ಲೆಂಡ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಸ್ಯಾಮ್ಸನ್ 42 ಎಸೆತಗಳಲ್ಲಿ 89 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಕೊನೆಯ ಹಂತದಲ್ಲಿ ಶಿವಂ ದುಬೆ ಅವರ ಸ್ಫೋಟಕ 43 ರನ್ಗಳ ನೆರವಿನಿಂದ ಭಾರತ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ಗಳ ದಾಖಲೆಯ ಮೊತ್ತವನ್ನು ಕಲೆಹಾಕಿತು.
ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಯುವ ಬ್ಯಾಟರ್ ಜೇಕಬ್ ಬೆಥೆಲ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಭಾರತೀಯರಲ್ಲಿ ಆತಂಕ ಮೂಡಿಸಿದ್ದರು. ಕೇವಲ 46 ಎಸೆತಗಳಲ್ಲಿ ಶತಕ ಪೂರೈಸಿದ ಅವರು ಇಂಗ್ಲೆಂಡ್ ತಂಡವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ಸ್ಯಾಮ್ ಕರ್ರನ್ ಕೂಡ ಬೆಥೆಲ್ಗೆ ಉತ್ತಮ ಸಾಥ್ ನೀಡಿದರಾದರೂ, ನಿರ್ಣಾಯಕ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ್ದು ಇಂಗ್ಲೆಂಡ್ಗೆ ಭಾರೀ ಹಿನ್ನಡೆಯಾಯಿತು. ಬೆಥೆಲ್ 105 ರನ್ ಗಳಿಸಿ ಔಟಾಗುವುದರೊಂದಿಗೆ ಇಂಗ್ಲೆಂಡ್ನ ಗೆಲುವಿನ ಆಸೆ ಕಮರಿತು.
ಅಂತಿಮವಾಗಿ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 246 ರನ್ಗಳಷ್ಟೇ ಗಳಿಸಲು ಶಕ್ತವಾಯಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ ಅತ್ಯಂತ ಮಿತವ್ಯಯಿ ಬೌಲಿಂಗ್ ಪ್ರದರ್ಶಿಸಿ ಒಂದು ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಪ್ರಮುಖ ವಿಕೆಟ್ ಉರುಳಿಸಿ ಜಯದ ಹಾದಿಯನ್ನು ಸುಗಮಗೊಳಿಸಿದರು. ಅಪ್ರತಿಮ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಭಾರತ ತಂಡವು ಇದೀಗ ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

