
ಹನೂರು: ತಾಲ್ಲೂಕಿನ ವಿಶೇಷ ಚೇತನ ಮಹಿಳೆಯೊಬ್ಬರಿಗೆ ಪಿಂಚಣಿ ಆದೇಶ ಪ್ರತಿ ನೀಡದೆ ಕಳೆದ ಎರಡು ವರ್ಷಗಳಿಂದ ಅಲೆದಾಡಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹನೂರು ತಹಸೀಲ್ದಾರ್ ಚೈತ್ರಾ ಅವರು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ಪಿಂಚಣಿ ಸ್ಥಗಿತಗೊಂಡಿದೆಯೇ ಹೊರತು ಉದ್ದೇಶಪೂರ್ವಕ ವಿಳಂಬವಾಗಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊನ್ನಾಚ್ಚಿ ಗ್ರಾಮದ ರಾಚಮ್ಮ (45) ಎಂಬುವವರು 76% ಅಂಗವಿಕಲತೆ ಹೊಂದಿದ್ದು, ಇವರಿಗೆ 2010ರಲ್ಲಿಯೇ ನಿಯಮಾನುಸಾರ ಮಾಸಿಕ 1,400 ರೂಪಾಯಿ ಪಿಂಚಣಿ ಮಂಜೂರಾಗಿತ್ತು. ಆದರೆ, 2022ರಲ್ಲಿ ಇವರು 90% ಅಂಗವಿಕಲತೆ ದೃಢೀಕರಣ ಪತ್ರವನ್ನು ಸಲ್ಲಿಸಿದಾಗ, ಹಳೆಯ ಪಿಂಚಣಿಯ ಮುಂದುವರಿಕೆಯ ಬದಲಿಗೆ ಮತ್ತೊಮ್ಮೆ ಹೊಸದಾಗಿ 1,400 ರೂಪಾಯಿ ಮಂಜೂರಾಗಿತ್ತು. ಇದರಿಂದಾಗಿ ಫಲಾನುಭವಿಯ ಖಾತೆಗೆ ಒಟ್ಟು 2,800 ರೂಪಾಯಿ ಪಿಂಚಣಿ ಜಮೆಯಾಗಿದ್ದು, ಇದು ‘ಡಬಲ್ ಪಾವತಿ’ಯ ಪಟ್ಟಿಗೆ ಸೇರಿದೆ ಎಂದು ತಹಸೀಲ್ದಾರ್ ವಿವರಿಸಿದ್ದಾರೆ.
ಸರ್ಕಾರದ ನಿಯಮದಂತೆ ಹೆಚ್ಚುವರಿಯಾಗಿ ಪಾವತಿಯಾಗಿರುವ ಮೊತ್ತವನ್ನು ಪುನಃ ಸರ್ಕಾರಕ್ಕೆ ಮರುಪಾವತಿ ಮಾಡಬೇಕಾಗಿರುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಹಣದ ವಸೂಲಾತಿ ಪ್ರಕ್ರಿಯೆಗಾಗಿ ಸದ್ಯಕ್ಕೆ ಮಾಸಾಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಫಲಾನುಭವಿಯು ಹೆಚ್ಚುವರಿ ಹಣವನ್ನು ಹಿಂತಿರುಗಿಸಿದ ತಕ್ಷಣವೇ ನಿಯಮಾನುಸಾರ ಅವರ ಪಿಂಚಣಿಯನ್ನು ಮರುಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಸಾರ್ವಜನಿಕರು ಈ ತಾಂತ್ರಿಕ ವಿಚಾರವನ್ನು ಅರ್ಥೈಸಿಕೊಳ್ಳಬೇಕು ಮತ್ತು ಯಾವುದೇ ತಪ್ಪು ಕಲ್ಪನೆಗಳನ್ನು ಹೊಂದಬಾರದು ಎಂದು ತಹಸೀಲ್ದಾರ್ ಮನವಿ ಮಾಡಿದ್ದಾರೆ.
ವರದಿ: ಕಾರ್ತಿಕ್ ಗೌಡ, ಹನೂರು.

