ಸಮೀಕ್ಷೆಗೆ ಚಾಲನೆ: ಧಾರವಾಡದಲ್ಲಿ ಡಿಸಿ ಪರಿಶೀಲನೆ, ಸಾರ್ವಜನಿಕರಿಗೆ ಸಹಕಾರಕ್ಕೆ ಮನವಿ

Spread the love

ಧಾರವಾಡ: ಸೆ. 22 – ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾದ್ಯಂತ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಧಾರವಾಡ ಜಿಲ್ಲೆಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸ್ವತಃ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ಪರಿಶೀಲಿಸಿದರು.

ಜಿಲ್ಲಾಧಿಕಾರಿಗಳು ಇಂದು ಮಧ್ಯಾಹ್ನ ಧಾರವಾಡ ನಗರದ ಪೆಂಡಾರಗಲ್ಲಿ ಮತ್ತು ತಡಕೋಡ ಓಣಿ ಪ್ರದೇಶಗಳಲ್ಲಿ ಸಂಚರಿಸಿ, ಸಮೀಕ್ಷಕರು ನಡೆಸುತ್ತಿರುವ ಕಾರ್ಯವನ್ನು ಕೂಲಂಕಷವಾಗಿ ಪರಿಶೀಲಿಸಿದರು. ಈ ವೇಳೆ, ಪೆಂಡಾರಗಲ್ಲಿಯ ರೇಣುಕಾ ಬೋಮ್ಮಣ್ಣವರ ಅವರ ಕುಟುಂಬವನ್ನು ಭೇಟಿ ಮಾಡಿ, ಸಮೀಕ್ಷೆಯ ಮಹತ್ವ ಹಾಗೂ ಉಪಯುಕ್ತತೆಯನ್ನು ವಿವರಿಸಿದರು. ಸಮೀಕ್ಷಾ ಪ್ರಶ್ನಾವಳಿ ಬಗ್ಗೆ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದುಕೊಂಡರು.
ಅಕ್ಟೋಬರ್ 7ರೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಸೂಚನೆ

ಸಮೀಕ್ಷಾ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಸಮೀಕ್ಷಕರಿಗೆ ಸೂಕ್ತ ತರಬೇತಿ ನೀಡಲಾಗಿದೆ. ನಿಯೋಜಿತ ಸಿಬ್ಬಂದಿಗಳು ತಮಗೆ ಹಂಚಿಕೆ ಆಗಿರುವ ಮನೆ ಮತ್ತು ಕುಟುಂಬಗಳ ಮಾಹಿತಿಯನ್ನು ನಿಯಮಾನುಸಾರ ಭರ್ತಿ ಮಾಡಬೇಕು. ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೆ ತಕ್ಷಣ ಜಿಲ್ಲಾ ತಾಂತ್ರಿಕ ಸಮಾಲೋಚಕರು ಅಥವಾ ಸಹಾಯವಾಣಿಗೆ ಕರೆ ಮಾಡಿ ಪರಿಹರಿಸಿಕೊಳ್ಳಬೇಕು ಎಂದು ಸೂಚಿಸಿದರು.
ಎಲ್ಲಾ ಸಮೀಕ್ಷಕರು ತಮಗೆ ಗುರುತಿಸಲಾದ ಕುಟುಂಬಗಳ ಸಮೀಕ್ಷೆಯನ್ನು ಅಕ್ಟೋಬರ್ 7 ರೊಳಗೆ ಪೂರ್ಣಗೊಳಿಸಬೇಕು. ಪ್ರತಿದಿನ ಸಂಜೆ ಪ್ರಗತಿ ವರದಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಸುಮಾರು 5.46 ಲಕ್ಷ ಕುಟುಂಬಗಳನ್ನು ಈ ಸಮೀಕ್ಷೆಗಾಗಿ ಗುರುತಿಸಲಾಗಿದ್ದು, ಹೆಸ್ಕಾಂ ಐಡಿ ಮೂಲಕ ಪ್ರತಿಯೊಂದು ಮನೆಗೂ ಪ್ರತ್ಯೇಕ ಐಡಿ ನೀಡಿ, 150 ರಿಂದ 200 ಮನೆಗಳನ್ನು ಒಂದು ಗುಂಪಾಗಿ ವಿಂಗಡಿಸಲಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 4,880 ಸಮೀಕ್ಷಕರು ಮತ್ತು ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.
“ಎಲ್ಲ ಸಾರ್ವಜನಿಕರೂ ಸಹಕರಿಸುವ ಮೂಲಕ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು,” ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಭಾನುಮತಿ ಎಚ್. ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲ್ಲೂಕುವಾರು ಕಿಟ್‌ಗಳ ವಿತರಣೆಯ ವಿವರ

ತಾಲ್ಲೂಕುವಿತರಿಸಿದ ಕಿಟ್‌ಗಳ ಸಂಖ್ಯೆ
ಹುಬ್ಬಳ್ಳಿ ನಗರ1,870
ಹುಬ್ಬಳ್ಳಿ ಗ್ರಾಮೀಣ370
ಕಲಘಟಗಿ376
ಕುಂದಗೋಳ354
ಅಣ್ಣಿಗೇರಿ167
ನವಲಗುಂದ258
ಧಾರವಾಡ ನಗರ844
ಧಾರವಾಡ (ಗ್ರಾಮೀಣ)510

Leave a Reply

Your email address will not be published. Required fields are marked *