ಪುತ್ತೂರಿನಲ್ಲಿ ಅಶೋಕ ಜನಮನ ಕಾರ್ಯಕ್ರಮದಲ್ಲಿ ನೂಕುನುಗ್ಗಲು: ೧2ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Spread the love

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಸೋಮವಾರ ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ಆಯೋಜಿಸಿದ್ದ ‘ಅಶೋಕ ಜನಮನ – ೨೦೨೫’ ಕಾರ್ಯಕ್ರಮದಲ್ಲಿ ಭಾರೀ ಜನಸ್ತೋಮದಿಂದ ನೂಕುನುಗ್ಗಲು ಉಂಟಾಗಿ ೧೩ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಅಸ್ವಸ್ಥರಾದವರನ್ನು ತಕ್ಷಣವೇ ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರತಿ ವರ್ಷ ರೈ ಎಸ್ಟೇಟ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ವಸ್ತ್ರ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಬಾರಿ ‘ಅಶೋಕ ಜನಮನ’ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಉಡುಗೊರೆ ವಿತರಣೆ ಮಾಡುವ ಘೋಷಣೆಯಿಂದ ಕೊಂಬೆಟ್ಟು ಕ್ರೀಡಾಂಗಣದ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಜನರು ಸ್ಥಳಕ್ಕೆ ಆಗಮಿಸಿದ್ದರು.

ಮಧ್ಯಾಹ್ನದ ಬಿಸಿಲಿನ ತಾಪ, ನೀರಿನ ಕೊರತೆ ಹಾಗೂ ವಿಳಂಬದಿಂದ ಜನತೆ ತೀವ್ರವಾಗಿ ಬೇಸತ್ತು ಹೋಗಿದ್ದರು. ಮಧ್ಯಾಹ್ನ ೧೨ ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಒಂದು ಗಂಟೆ ವಿಳಂಬವಾಗಿ ಆರಂಭಗೊಂಡು, ಮಧ್ಯಾಹ್ನ ೩ ಗಂಟೆಯ ವೇಳೆಗೆ ಮುಗಿಯಿತು. ಮುಖ್ಯಮಂತ್ರಿ ಪಾಲ್ಗೊಂಡಿದ್ದ ಕಾರಣಕ್ಕೆ ನೀರಿನ ಬಾಟಲಿಗಳನ್ನು ಒಳಗೆ ತರಲು ಪೊಲೀಸರಿಂದ ನಿರ್ಬಂಧ ಇರಿಸಲಾಗಿತ್ತು. ಬೆಳಿಗ್ಗೆಯಿಂದಲೇ ನೀರು ಮತ್ತು ಆಹಾರವಿಲ್ಲದೆ ಕಾಯುತ್ತಿದ್ದ ಜನರು ದಣಿವಿನಿಂದ ನರಳುತ್ತಿದ್ದರು.

ಕಾರ್ಯಕ್ರಮ ಮುಗಿದ ನಂತರ ಉಡುಗೊರೆ ವಿತರಣೆ ಕೌಂಟರ್‌ಗಳತ್ತ ಏಕಾಏಕಿ ಜನರು ಮುಗಿಬಿದ್ದಿದ್ದು, ನೂಕುನುಗ್ಗಲು ಉಂಟಾಗಿದೆ. ಇದರಿಂದ ಹಲವರು ಉಸಿರುಕಟ್ಟಿ ಮತ್ತು ನಿರ್ಜಲೀಕರಣದಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಲೆಸುತ್ತು, ಹೈಪೊಗ್ಲೈಸಿಮಿಯಾ (ರಕ್ತದ ಸಕ್ಕರೆ ಪ್ರಮಾಣ ಕಡಿಮೆಯಾಗುವುದು) ಹಾಗೂ ದೇಹದ ಶೋಷಣೆ ಸಮಸ್ಯೆಯಿಂದ ಬಳಲಿದ ೧೩ ಮಂದಿಯನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಅಸ್ವಸ್ಥರಿಗೆ ಐ.ವಿ. ಫ್ಲೂಯಿಡ್ಸ್‌ ನೀಡಿ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಏಳು ಮಂದಿ ಚಿಕಿತ್ಸೆ ಪಡೆದ ಬಳಿಕ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಬಂದ ಅನೇಕ ಮಕ್ಕಳು ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ದೃಶ್ಯಗಳು ಕಂಡುಬಂದಿವೆ. ಪೋಷಕರು ಅಂಗಡಿಗಳಿಂದ ನೀರು ಖರೀದಿಸಿ ಮಕ್ಕಳಿಗೆ ಕುಡಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರು. ಭಾರಿ ಜನಸ್ತೋಮದ ಕಾರ್ಯಕ್ರಮಗಳಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ಸಂಘಟಕರು ಹಾಗೂ ಸಂಬಂಧಪಟ್ಟ ಇಲಾಖೆಗಳು ವಿಫಲವಾಗಿವೆ ಎಂಬ ಟೀಕೆಗಳು ಸ್ಥಳೀಯರಿಂದ ಕೇಳಿಬಂದಿವೆ.

Leave a Reply

Your email address will not be published. Required fields are marked *